ಬಕ್ರೀದ್ ಹಬ್ಬದಲ್ಲಿ 50 ಹೆಚ್ಚು ಜನ ಸೇರುವಂತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.30- ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿ ಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದ ಮುಸ್ಲಿಂ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಬಕ್ರೀದ್‍ಅನ್ನು ಸರ್ಕಾರದ ಆದೇಶದ ಅನುಸಾರವಾಗಿಯೇ ಆಚರಿಸಬೇಕು ಎಂದು ಹೇಳಿದರು.

ಮಸೀದಿಯಲ್ಲಿ 50ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಬ್ಯಾಚ್ ಗಳನ್ನು ಮಾಡಿ ನಮಾಜ್ ಸಲ್ಲಿಸಬೇಕು. ಪ್ರತಿಯೊಬ್ಬರೂ ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್‍ಅನ್ನು ಕಡ್ಡಾಯವಾಗಿ ಹಾಕಿರಬೇಕು ಎಂದರು.

ಬಕ್ರೀದ್ ಆಚರಣೆಯಲ್ಲಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವುದು ರೂಢಿಗತವಾಗಿ ಬಂದಿದೆ. ಆದರೆ, ಸೋಂಕು ತಗುಲುವ ಅಪಾಯದ ಕಾರಣ ಯಾರೂ ಆಲಂಗಿಸಿಕೊಳ್ಳಬಾರದು. ಮಸೀದಿಯಲ್ಲಿ ಯಾವುದೇ ವಸ್ತು ಮುಟ್ಟಬಾರದು ಎಂದು ಸೂಚಿಸಿದರು.

ಎಲ್ಲ ಮಸೀದಿಗಳನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವರು. ಅಲ್ಲಿ ಥರ್ಮಲ್ ಸ್ಕ್ಯಾನರ್ ಇಟ್ಟಿರಬೇಕು. ಸ್ಯಾನಿಟೈಜ್ ಮಾಡಬೇಕು. ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಯಾವ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲರೂ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಣೆ ಮಾಡಿ ಎಲ್ಲರಿಗೂ ನೀವು ಮಾದರಿಯಾಗಿ ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ನಾಗೇಶ್, ಪಶುಪಾಲನಾ ಇಲಾಖೆಯ ಅಧಿಕಾರಿ ಬಾಬುರೆಡ್ಡಿ ,ವಕ್ಫ್‍ಬೋರ್ಡ್ ಸಿಇಒ ಫರಿದಾಲ, ಮಹಾನಗರಪಾಲಿಕೆ ಸದಸ್ಯ ನಯಾಜ್, ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ ನಿರೀಕ್ಷರಾದ ನವೀನ್, ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin