ಮೀಸಲಾತಿ ಬಿಕ್ಕಟ್ಟು, ಬೊಮ್ಮಾಯಿ ಸರ್ಕಾರಕ್ಕೆ ಇಕ್ಕಟ್ಟು..!
ಬೆಂಗಳೂರು,ಆ.16-ಸಂಪುಟ ರಚನೆ, ಸಚಿವರ ಖಾತೆ ಹಂಚಿಕೆ, ಶಾಸಕರ ಅಸಮಧಾನ ಸೇರಿದಂತೆ ಹತ್ತು ಹಲವು ಬಿಕ್ಕಟ್ಟಗಳನ್ನು ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಗೆ ಇದೀಗ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಮತ್ತೊಂದು ಇಕ್ಕಟ್ಟಿಗೆ ಸಿಲುಕಿಸಲಿದೆ. ರಾಜ್ಯದಲ್ಲಿರುವ ಹಲವಾರು ಸಮುದಾಯಗಳು ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದ ವಾರ ಸಂಸತ್ನ ಉಭಯ ಸದನಗಳಲ್ಲಿ ಸಂವಿಧಾನದ 121ನೇ ಕಾಯ್ದೆಗೆ ತಿದ್ದುಪಡಿ ಮಾಡಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಕ್ಕೆ ನೀಡಿದೆ. ಈ ತಿದ್ದುಪಡಿ ಮಸೂದೆಯಿಂದ ಇನ್ನಷ್ಟು ಸಮುದಾಯಗಳು ಒಬಿಸಿ ಸೇರ್ಪಡೆಗೆ ಬೇಡಿಕೆ ಇಡುವ ನಿರೀಕ್ಷೆ ಇದೆ.ಅದೇ ರೀತಿ ಕರ್ನಾಟಕದಲ್ಲೂ ಕೆಲವು ಸಮುದಾಯಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ಮಾಡಿವೆ.
ಕುರುಬ: ಹಿಂದುಳಿದ ವರ್ಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ ಎಂದರೆ ಅದು ಕುರುಬ ಜನಾಂಗ. ಈ ಸಮುದಾಯ ಪ್ರಸ್ತುತ 2ಎ ನಲ್ಲಿದೆ. ಎಸ್ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕುಲ ಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಿದೆ. ಕಾಡುಕುರುಬ, ಜೇನು ಕುರುಬ, ಗೊಂಡ ಸಮುದಾಯಗಳು ಈಗಾಗಲೇ ಎಸ್ಟಿಯಡಿ ಇವೆ.
ಪಂಚಮಸಾಲಿ: ಪಂಚಮಸಾಲಿ ಇದು ವೀರಶೈವ ಲಿಂಗಾಯತ ಸಮುದಾಯದ ಒಂದು ಒಳ ಪಂಗಡವಾಗಿದ್ದು, 3ಬಿ ಪ್ರವರ್ಗದಲ್ಲಿದೆ. ಈಗ 2ಎಗೆ ಸೇರಿಸಿ ಎಂಬುದು ಪಂಚಮಸಾಲಿ ಸಮುದಾಯದ ಒತ್ತಾಯ. ಸರ್ಕಾರವು ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ನಿರ್ದೇಶನ ನೀಡಿದೆ.
ವಾಲ್ಮೀಕಿ: ವಾಲ್ಮೀಕಿ ಸಮುದಾಯ ಈಗಿರುವ ಮೀಸಲಾತಿಯನ್ನು ಶೇ.3 ರಿಂದ 7.5ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ. ಈಗಾಗಲೇ ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗ ವರದಿ ನೀಡಿದ್ದು, ಶೇ.7.5 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಶೀಘ್ರವೇ ಮೀಸಲಾತಿ ಹೆಚ್ಚಳ ಮಾಡುವುದಾಗಿ ಹಿಂದಿನ ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಒಕ್ಕಲಿಗ: ಒಕ್ಕಲಿಗ ಸಮುದಾಯ ರಾಜ್ಯದಲ್ಲಿ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ. ಪ್ರಸಕ್ತ ಪ್ರವರ್ಗ 3ಎ ಯಲ್ಲಿ ಮೀಸಲಾತಿ ಹೊಂದಿದೆ. ಹಿಂದುಳಿದಿರುವಿಕೆ ಆಧಾರದಲ್ಲಿ ಪ್ರವರ್ಗ 2ಎಗೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ.
ಗಂಗಾಮತಸ್ಥರು:ಅಂಬಿಗ, ಮೊಗವೀರ, ಕೊಲಿಕಾರ, ಬೆಸ್ತ, ಸುಣಗಾರ, ವಾಲಿಕಾರ, ಕೋಲಿ, ಕಬ್ಬಲಿಗ ಸಹಿತ 39 ಒಳ ಪಂಗಡಗಳಿವೆ. ರಾಷ್ಟ್ರ ಮಟ್ಟದಲ್ಲಿ ಕೋಲಿ ಸಮಾಜ ಎಸ್ಟಿ ಪ್ರವರ್ಗದಲ್ಲಿದೆ. ರಾಜ್ಯ ಸರ್ಕಾರ ಈ ಸಮುದಾಯಗಳನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಗಾಣಿಗ: ಗಾಣಿಗ ಸಮುದಾಯ ವೀರಶೈವ ಲಿಂಗಾಯತದ ಒಳ ಪಂಗಡಗಳಲ್ಲಿ ಒಂದಾಗಿದ್ದು, ಪ್ರಸ್ತುತ ಪ್ರವರ್ಗ 2ಎ ನಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಗಾಣಿಗ ಎಂದು ನಮೂದಿಸಿದರೆ, ಪ್ರವರ್ಗ 3ಬಿ ಮೀಸಲಾತಿ ದೊರೆಯುತ್ತದೆ. ಹಿಂದೂ ಗಾಣಿಗ ಎಂದು ನಮೂದಿಸಿದರೆ ಪ್ರವರ್ಗ 2ಎ ನಲ್ಲಿ ಸಿಗುತ್ತಿದೆ. ಎಸ್ಟಿಗೆ ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.
ಮಡಿವಾಳ: ಪ್ರಸ್ತುತ ಪ್ರವರ್ಗ 2ಎ ನಲ್ಲಿರುವ ಮಡಿವಾಳ ಸಮುದಾಯ, ಎಸ್ಸಿಗೆ ಸೇರಿಸಬೇಕೆಂಬ ಬೇಡಿಕೆ ಬಂದಿದೆ.
ಸವಿತಾ ಸಮಾಜ: ಪ್ರಸ್ತುತ ಪ್ರವರ್ಗ 2ಎ ನಲ್ಲಿರುವ ಸವಿತಾ ಸಮಾಜ ಶೇ.15ರಷ್ಟು ಮೀಸಲಾತಿ ಇದ್ದು, ಸವಿತಾ ಸಮಾಜ ಸಹಿತ ವೃತ್ತಿ ಆಧಾರಿತ ಸಮುದಾಯಗಳಿಗೆ ಶೇ.8ರಷ್ಟು ಮೀಸಲಾತಿ ನೀಡಿ ಪ್ರತ್ಯೇಕ ಪ್ರವರ್ಗ ರಚಿಸಬೇಕು ಎಂಬ ಬೇಡಿಕೆ ಬಂದಿದೆ.
ಮರಾಠ: ಮರಾಠ ಸಮುದಾಯ ಪ್ರಸಕ್ತ ಪ್ರವರ್ಗ 3ಬಿ ನಲ್ಲಿದೆ. ಪ್ರವರ್ಗ 2ಎಗೆ ಸೇರಿಸುವಂತೆ ಬೇಡಿಕೆ ಇದೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಈ ಬಗ್ಗೆ ಶಿಫಾರಸು ಮಾಡಿದೆ. ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಮರಾಠ ಮತ್ತು ಮರಾಠಿ ಹೆಸರಿನಲ್ಲಿರುವ ಸಮುದಾಯವನ್ನು ಎಸ್ಟಿಗೆ ಸೇರಿಸಲಾಗಿದೆ.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದ್ದು, ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಿದರೆ ಬೇಡಿಕೆ ಇಟ್ಟಿರುವ ಸಮುದಾಯಗಳಿಗೆ ಅನುಕೂಲವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.