ರಾಜ್ಯದ ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚುತ್ತಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಪ್ರಮುಖ ನದಿಗಳ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಲಿಂಗನಮಕ್ಕಿ, ಸೂಪಾ, ವರಾಹಿ, ಆರಂಗಿ, ಹೇಮಾವತಿ, ಕೆ.ಆರ್.ಎಸ್., ಕಬಿನಿ, ತುಂಗಭದ್ರಾ, ಘಟಪ್ರಭಾ, ಆಲಮಟ್ಟಿ ಜಲಾಶಯಗಳ ಒಳ ಹರಿವು ಆರಂಭವಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಲಿಂಗನಮಕ್ಕಿ ಜಲಾಶಯಕ್ಕೆ ಐದು ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದೆ.

ಸೂಪಾ, ವರಾಹಿ, ಹೇಮಾವತಿ, ಕೆಆರ್‍ಎಸ್, ಭದ್ರಾ, ಘಟಪ್ರಭಾ ಜಲಾಶಯಗಳಿಗೆ ಒಂದು ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಕಬಿನಿ ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದ್ದರೆ, ಆಲಮಟ್ಟಿ ಜಲಾಶಯಕ್ಕೆ 500 ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದೆ.

ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ನದಿಗಳು ಪ್ರವಾಹದಿಂದ ಉಕ್ಕಿ ಹರಿದಿದ್ದಲ್ಲದೆ, ಜಲಾಶಯಗಳು ಭರ್ತಿಯಾಗಿದ್ದವು. ಹೀಗಾಗಿ ಈ ವರ್ಷವೂ ಜಲಾಶಯಗಳ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.

ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಆರಂಭವಾಗಿದ್ದು, ನಾಲ್ಕೂ ಜಲಾಶಯಗಳ ಒಳ ಹರಿವು ಹೆಚ್ಚುತ್ತಿದೆ. ಈ ಬಾರಿಯೂ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿವೆ.

ಮುಂಗಾರಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜಲಾಶಯಗಳಿಗೆ ನೀರು ಸಾಕಷ್ಟು ಹರಿದು ಬರುವ ಸಾಧ್ಯತೆ ಇದ್ದು, ಕೃಷಿಗೂ ಅಗತ್ಯವಿರುವಷ್ಟು ನೀರು ಲಭ್ಯವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Facebook Comments