ಸ್ವಚ್ಛವಾಗಿಟ್ಟುಕೊಳ್ಳದ ನಿವೇಶನದಾರರಿಗೆ ಬಿಬಿಎಂಪಿ ಭಾರೀ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಒಂದು ಲಕ್ಷ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ. ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದ ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ನ್ಯೂಟೌನ್, ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಹಾಗೂ ಕುವೆಂಪು ನಗರದ ನಿವಾಸಿಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.

ನಗರದಿಂದ ಹೊರವಲಯದಲ್ಲಿರುವ ಈ ವಾರ್ಡ್ ಗಳಲ್ಲಿ ಅತ್ಯಧಿಕ ಖಾಲಿ ನಿವೇಶನಗಳಿದ್ದು, ಬಹುತೇಕ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುವುದನ್ನು ಮನಗಂಡು ಬಿಬಿಎಂಪಿ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ನಿರ್ಮಾಣ ಮತ್ತು ಕಟ್ಟಡ ಕೆಡುವಿಕೆ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಿಯಮಾನುಸಾರ ತ್ಯಾಜ್ಯ ವಿಲೇವಾರಿ ಮಾಡಬೇಕು. ತೋಟಗಾರಿಕೆ ಹಾಗೂ ಕೈತೋಟ ತ್ಯಾಜ್ಯವನ್ನು ಸ್ಥಳೀಯ ಪ್ರಾಕಾರದವರು ಸೂಚಿಸಿದಂತೆ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಘನತ್ಯಾಜ್ಯವನ್ನು ಬೀದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳ, ಚರಂಡಿ ಮತ್ತು ಜಲಕಾಯಗಳಲ್ಲಿ ಎಸೆಯಕೂಡದು ಹಾಗೂ ಸುಡಬಾರದು ಎಂದು ಸೂಚಿಸಲಾಗಿದೆ. ಖಾಲಿ ನಿವೇಶನವನ್ನು ಸ್ವಚ್ಛವಾಗಿಟ್ಟು ಕೊಳ್ಳದವರಿಗೆ 50 ಸಾವಿರದಿಂದ 1 ಲಕ್ಷದವರೆಗೂ ವಿಸ್ತರಣಾನುಸಾರ ದಂಡ ವಿಧಿಸಲಾಗುವುದು ಎಂದು ಯಲಹಂಕ ವಲಯದ ಜಂಟಿ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯಡಿ ದಂಡ ಇಲ್ಲವೆ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Facebook Comments