ಇಂದೇ ನಿರ್ಧಾರವಾಗಲಿದೆ ಅತೃಪ್ತರ ಹಣೆಬರಹ..! ಎಲ್ಲರ ಚಿತ್ತ ಸ್ಪೀಕರತ್ತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.11- ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 10 ಮಂದಿ ಭಿನ್ನಮತೀಯರ ಹಣೆಬರಹವನ್ನು ಇಂದು ಸಂಜೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೀರ್ಮಾನಿಸಲಿದ್ದಾರೆ.

ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಸಲ್ಲಿಸಿರುವ ಶಾಸಕರೆಲ್ಲರೂ ಕರ್ನಾಟಕದ ವಿಧಾನಸಭೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಬೇಕು. ಅವರು ನೀಡಿರುವ ರಾಜೀನಾಮೆ ಪತ್ರದ ಬಗ್ಗೆ ಸ್ಪೀಕರ್ ಇಂದೇ ತೀರ್ಮಾನಿಸಬೇಕು. ಸ್ಪೀಕರ್ ಆದೇಶದ ಬಗ್ಗೆ ನಾವು ನಾಳೆ ತೀರ್ಪು ನೀಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಾಲಯದ ಈ ತೀರ್ಪಿನಿಂದಾಗಿ ಕಳೆದ 5 ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರೆಲ್ಲರೂ ಬೆಂಗಳೂರಿಗೆ ಆಗಮಿಸಲೇಬೇಕಾಗಿದೆ. ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶ ಪೂರ್ವಕವಾಗಿಯೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಭಿನ್ನಮತೀಯ ಶಾಸಕರು ನಿನ್ನೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠ, ಸ್ಪೀಕರ್ ಮುಂದೆ ಎಲ್ಲ ಶಾಸಕರು ಸಂಜೆ 6 ಗಂಟೆಯೊಳಗೆ ಹಾಜರಾಗಬೇಕು. ಅವರ ರಾಜೀನಾಮೆ ಪತ್ರ ಕುರಿತಂತೆ ಇಂದೇ ತೀರ್ಮಾನ ಕೈಗೊಂಡು ಆದೇಶ ನೀಡಿ ಎಂದು ಸೂಚಿಸಿ ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಕಚೇರಿಗೆ ನೋಟಿಸ್ ನೀಡಿತು.

ಭಿನ್ನಮತೀಯ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಕರ್ನಾಟಕದಲ್ಲಿ 10 ಮಂದಿ ಶಾಸಕರು ಖುದ್ದು ಸ್ಪೀಕರ್ ಕಚೇರಿಯನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ ಸ್ಪೀಕರ್ ಯಾವ ಕಾರಣಕ್ಕಾಗಿ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಕೂಡಲೇ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಜನಪ್ರತಿನಿಧಿಯೊಬ್ಬರು ಸ್ವಯಂಪ್ರೇರಿತರಾಗಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಬೇಕಾಗುತ್ತದೆ. ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ನ್ಯಾಯಾಲಯದಿಂದಲೇ ಆದೇಶ ನೀಡಬೇಕೆಂದು ಕೋರಿದರು.

ಶಾಸಕರೊಬ್ಬರು ರಾಜೀನಾಮೆ ನೀಡಿರುವುದನ್ನು ಸ್ವೀಕರಿಸಬೇಕೆ ಇಲ್ಲವೇ ತಿರಸ್ಕಾರ ಮಾಡಬೇಕೆ ಎಂಬುದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು, ಸಂಜೆಯೊಳಗೆ ನಿಮ್ಮ ತೀರ್ಮಾನವನ್ನು ಪ್ರಕಟಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಸರ್ಕಾರದ ಪರ ವಾದ ಮಂಡಿಸಲು ಅಭಿಷೇಕ್ ಮನುಸಿಂಘ್ವಿ ಮುಂದಾದರಾದರೂ ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಕಚೇರಿಗೆ ನೋಟಿಸ್ ಜಾರಿ ಮಾಡಿ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಕಳೆದ ಶನಿವಾರ ಕಾಂಗ್ರೆಸ್‍ನ 10 ಮಂದಿ, ಜೆಡಿಎಸ್‍ನ ಮೂವರು ಶಾಸಕರು ರಾಜೀನಾಮೆ ನೀಡಿದ್ದರು. ವಿಧಾನಸಭೆಯ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದರು.  ಮಂಗಳವಾರ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದ ರಮೇಶ್‍ಕುಮಾರ್, ಶಾಸಕರಾದ ಆನಂದ್‍ಸಿಂಗ್, ಪ್ರತಾಪ್‍ಗೌಡ ಪಾಟೀಲ, ನಾರಾಯಣಗೌಡ, ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರ ಪತ್ರಗಳನ್ನು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದರು.

ಎಚ್.ವಿಶ್ವನಾಥ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಭೈರತಿ ಬಸವರಾಜ್, ಮುನಿರತ್ನ, ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮತ್ತು ರೋಷನ್‍ಬೇಗ್ ಅವರ ರಾಜೀನಾಮೆ ಪತ್ರಗಳು ಕಾನೂನು ಬದ್ಧವಾಗಿಲ್ಲ ಎಂದು ತಿರಸ್ಕರಿಸಿ ಮತ್ತೊಮ್ಮೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

# ಅತೃಪ್ತ ಶಾಸಕರ ದೂರು ಏನು?
ಜುಲೈ 6ರಂದು 13 ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇದರಲ್ಲಿ ಎಂಟು ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ, ಐವರ ಶಾಸಕರ ಪತ್ರಗಳು ಕ್ರಮಬದ್ಧವಾಗಿದೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ತಿಳಿಸಿದ್ದಾರೆ.

ಜುಲೈ 12ರಂದು ವಿಚಾರಣೆಗೆ ಹಾಜರಾಗಬೇಕೆಂದು ಐವರಲ್ಲಿ ಮೂವರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ವೀಕರ್ ಅವರಿಗೆ ಅರ್ಜಿ ಸಲ್ಲಿಸಿದ್ದರು.

ನಮ್ಮ ರಾಜೀನಾಮೆ ಅಂಗೀಕಾರವಾಗದೆ ಇರುವುದು ಸಂವಿಧಾನದ 14ನೇ ಪರಿಚ್ಚೇದದ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಕರ್ನಾಟಕ ವಿಧಾನಸಭಾ ನಿಯಮಾವಳಿಯ ರೂಲ್ ನಂಬರ್ 202 ಪ್ರಕಾರ ರಾಜೀನಾಮೆ ಪತ್ರ ಸಲ್ಲಿಸಿದೇವೆ.

ಪರಿಚ್ಛೇಧ 190 ರ ಪ್ರಕಾರ ರಾಜೀನಾಮೆ ಪತ್ರದಲ್ಲಿ ಕೇವಲ ಸಹಿ ಇದ್ದರೆ ಸಾಕು. ರಾಜೀನಾಮೆ ಪತ್ರ ಹೀಗೆ ಇರಬೇಕು ಎಂಬ ಕಾನೂನು ಇಲ್ಲ ಎಂದು ಅತೃಪ್ತರು ತಮ್ಮ ನಿರ್ಧಾರವನು ಸಮರ್ಥಿಸಿಕೊಂಡಿದ್ದರು.

# ಸ್ಪೀಕರ್ ವಾದವೇನು?:
ಸದನದ ನಡಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಲ್ಲಿಕೆಯಾಗಿರುವ 13 ರಾಜೀನಾಮೆ ಪತ್ರಗಳ ಪೈಕಿ 5 ರಾಜೀನಾಮೆ ಪತ್ರಗಳು ನಿಯಮ ಬದ್ಧವಾಗಿವೆ. ಖುದ್ದು ಹಾಜರಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವಂತೆ ಶಾಸಕರಿಗೆ ತಿಳುವಳಿಕೆ ಪತ್ರದ ಮೂಲಕ ಸೂಚಿಸಿದ್ದೇನೆ.

ಕ್ರಮಬದ್ಧವಾಗಿ ರಾಜೀನಾಮೆ ನೀಡಿದವರಿಗೆ ವಿಚಾರಣೆಗೆ ಆಗಮಿಸಲು ಸಮಯ ನಿಗದಿಪಡಿಸಿ, ಈ ಎಲ್ಲಾ ಪ್ರಕ್ರಿಯೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದರು.  ಸ್ಪೀಕರ್ ಅವರ ಈ ಕ್ರಮಕ್ಕೆ ಅತೃಪ್ತರು ಅಸಮಾಧಾನಗೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin