ಸುಪ್ರೀಂ ತೀರ್ಪಿನ ನಂತರ ಅತೃಪ್ತರಿಂದ ಒಗ್ಗಟ್ಟಿನ ವಿಡಿಯೋ ರಿಲೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.17- ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ. ಮುಂಬೈನ ರೆಸಾರ್ಟ್‍ನಲ್ಲಿ ತಂಗಿರುವ ಅತೃಪ್ತ ಶಾಸಕರು ಗುಂಪಾಗಿ ನಿಂತು ಹೇಳಿಕೆ ನೀಡಿದ್ದು, ನಾವೆಲ್ಲ ಒಟ್ಟಾಗಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ. ಎಲ್ಲಾ ಶಾಸಕರ ಪರವಾಗಿ ಬಿ.ಸಿ.ಪಾಟೀಲ್ ಅವರು ಇಂಗ್ಲೀಷ್‍ನಲ್ಲಿ ಮಾತನಾಡಿ, ಅದರ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

ಅದರ ಪ್ರಕಾರ ನಾವು ಈ ಹಿಂದೆ ತೆಗೆದುಕೊಂಡ ನಿಲುವಿಗೆ ಬದ್ಧರಾಗಿದ್ದೇವೆ. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಏನೇ ಆದರೂ ವಾಪಸ್ ಹೋಗುವುದಿಲ್ಲ, ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೊಟೇಲ್‍ನಲ್ಲಿ ತಂಗಿರುವ ಮಹೇಶ್ ಕುಮಟಳ್ಳಿ, ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಮುನಿರತ್ನ, ಭೈರತಿ ಬಸವರಾಜ್, ನಾರಾಯಣಗೌಡ, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್ ಅವರುಗಳು ಎರಡು ಸಾಲುಗಳಲ್ಲಿ ಶಿಸ್ತುಬದ್ಧವಾಗಿ ನಿಂತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಗುಂಪಿನಲ್ಲಿ ಶಾಸಕ ಸುಧಾಕರ್ ಕಾಣಿಸುತ್ತಿಲ್ಲ. ಈ 12 ಮಂದಿಯ ಜೊತೆ ಶಾಸಕರಾದ ಆನಂದ್‍ಸಿಂಗ್, ಸುಧಾಕರ್, ರಾಮಲಿಂಗಾರೆಡ್ಡಿ, ರೋಷನ್‍ಬೇಗ್ ಅವರುಗಳು ಕೂಡ ರಾಜೀನಾಮೆ ನೀಡಿದ್ದರು. ರೋಷನ್‍ಬೇಗ್ ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಹೋಗಲು ಪ್ರಯತ್ನಿಸಿದಾಗ ಎಸ್‍ಐಟಿ ಪೊಲೀಸರು ಐಎಂಎ ಹಗರಣದಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಿನ್ನೆ ಬಿಡುಗಡೆ ಮಾಡಿದ್ದರು.

ಇನ್ನು ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲೇ ಉಳಿದಿದ್ದು, ಕಾಂಗ್ರೆಸ್ ನಾಯಕರು ಪ್ರತಿದಿನ ಅವರ ಮನೆಬಾಗಿಲಿಗೆ ಹೋಗಿ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ.
ಶಾಸಕ ಸುಧಾಕರ್ ದೆಹಲಿಯಲ್ಲಿ ತಂಗಿದ್ದು, ಸೋಮವಾರ ಮುಂಬೈಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಈವರೆಗೆ ಅವರು ಮುಂಬೈನಲ್ಲಿ ಕಾಣಿಸಿಕೊಂಡಿಲ್ಲ. ಶಾಸಕ ಆನಂದ್‍ಸಿಂಗ್ ಕೂಡ ಈ ಗುಂಪಿನಿಂದ ಹೊರಗಿರುವಂತೆ ಕಾಣುತ್ತಿದೆ. ಪಕ್ಷೇತರ ಶಾಸಕರಾದ ಮುಳಬಾಗಿಲು ಕ್ಷೇತ್ರದ ನಾಗೇಶ್, ರಾಣೆಬೆನ್ನೂರಿನ ಶಂಕರ್ ಅವರು ಅತೃಪ್ತರ ಗುಂಪು ಫೋಟೋದಿಂದ ಹೊರಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin