BIG BREAKING : ರೀಟೈಲ್ ಮತ್ತು ಸಣ್ಣ ಉದ್ಯಮಗಳಿಗೆ ಬಿಗ್ ರಿಲೀಫ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 26- ಕೊರೊನಾ ವೈರಸ್ ದಾಳಿಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ರೀಟೈಲ್ ಮತ್ತು ರೀಟೈಲ್ ಸಣ್ಣ ಉದ್ಯಮಗಳಿಗೆ ಆರ್ಥಿಕ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ಮತ್ತೊಂದು ಬಂಪರ್ ಕೊಡುಗೆ ನೀಡಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‍ಎಂಇ) ವಲಯದಲ್ಲಿ ಮಾನ್ಯತೆ ಪಡೆದಿರುವ ಅಥವಾ ನೋಂದಣಿಯಾಗದಿರುವ ರೀಟೈಲ್ ಮತ್ತು ಸಣ್ಣ ಉದ್ಯಮಗಳಿಗೆ 3 ಲಕ್ಷ ಕೋಟಿ ರೂ.ಗಳ ತುರ್ತು ಸಾಲ ನೀಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

62 ದಿನಗಳ ಸುದೀರ್ಘ ಲಾಕ್‍ಡೌನ್‍ನಿಂದ ಪಾತಾಳಕ್ಕೆ ಕುಸಿದಿರುವ ಸಣ್ಣ ವ್ಯಾಪಾರಿಗಳು ಮತ್ತು ರೀಟೈಲ್ ಉದ್ಯಮದ ಮಂದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಘೋಷಿಸಲಾಗಿದೆ. ಇದರಿಂದ ದೇಶಾದ್ಯಂತ 7 ಕೋಟಿಗೂ ಅಧಿಕ ಸಣ್ಣ ವ್ಯಾಪಾರಿಗಳು ಮತ್ತು ರೀಟೈಲ್ ವರ್ತಕರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.

ಎಂಎಸ್‍ಎಂಇ ವಲಯದ ಪುನಶ್ಚೇತನಕ್ಕಾಗಿ ವಿತ್ತ ಸಚಿವಾಲಯ ಮೇ 12ರಂದು ದೊಡ್ಡಮಟ್ಟದ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತಾದರೂ ಈ ವಲಯದಲ್ಲಿ ನೋಂದಣಿಯಾಗದ ಅಥವಾ ಮಾನ್ಯತೆ ಪಡೆಯದ ಸಣ್ಣ ಮತ್ತು ರೀಟೈಲ್ ವ್ಯಾಪಾರಿಗಳನ್ನು ಸೇರಿಸಿರಲಿಲ್ಲ.

ಈಗ ಇವರನ್ನೂ ಸಹ ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.  ವಿವಿಧ ಕಾರಣಗಳಿಂದಾಗಿ ಎಂಎಸ್‍ಎಂಇ ವಲಯದಲ್ಲಿ ನೋಂದಣಿಯಾಗದ ಅಥವಾ ಮಾನ್ಯತೆ ಪಡೆಯದ ಸಣ್ಣ ಉದ್ಯಮಗಳು ಮತ್ತು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಈ ಹೊಸ ನೀತಿಯಿಂದಾಗಿ ಸಾಕಷ್ಟು ಪ್ರಯೋಜನವಾಗಿದೆ.

ಈ ಸಂಬಂಧ ನಿನ್ನೆ ವಿತ್ತ ಸಚಿವಾಲಯ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಈ ಸಂಬಂಧ ಎಲ್ಲ ರಾಜ್ಯಗಳಿಗೂ ಹೊಸ ನಿಯಮದ ಬಗ್ಗೆ ಇಂದು ಸುತ್ತೋಲೆ ಹೊರಡಿಸುವ ಸಾಧ್ಯತೆಯಿದೆ. ರೀಟೈಲ್ ಮತ್ತು ಸಣ್ಣ ಉದ್ದಿಮೆದಾರರಿಗೆ ನೀಡಲಾಗುವ 3 ಲಕ್ಷ ಕೋಟಿ ರೂ.ಗಳ ತುರ್ತು ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ.

ಎನ್‍ಸಿಜಿಟಿಸಿ ಮೂಲಕ ತುರ್ತು ಸಾಲಕ್ಕೆ ಖಾತ್ರಿ ನೀಡಲಿದ್ದು, ಯಾವುದೇ ದಾಖಲೆಗಳು ಅಥವಾ ಸ್ವತ್ತುಗಳ ಅಡಮಾನವಿಲ್ಲದೆ ತ್ವರಿತವಾಗಿ ಸಾಲ ಸೌಲಭ್ಯ ದೊರಕುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಲಿದೆ.

ಲಾಕ್‍ಡೌನ್‍ನಿಂದ ಯಾವುದೇ ಆರ್ಥಿಕ ಮೂಲದ ಅಭಾವದಿಂದ ಭಾರೀ ಸಂಕಕ್ಟಕ್ಕೀಡಾಗಿ ಸಣ್ಣ ಉದ್ಯಮ ಮತ್ತು ಚಿಲ್ಲರೆ ಮಾರಾಟ ವಹಿವಾಟು ಬಂದ್ ಮಾಡುವ ಹಂತದಲ್ಲಿರುವ 7 ಕೋಟಿಗೂ ಅಧಿಕ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments