ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನಿವೃತ್ತ ಚಾಲಕರ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.9- ಕಳೆದ ಮೂರು ದಿನಗಳಿಂದಲೂ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲು ಮುಂದಾಗಿದೆ.  ಕೆಎಸ್‍ಆರ್‍ಟಿಸಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿದ್ದು, 62 ವರ್ಷ ವಯೋಮಿತಿ ಮೀರದ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲಾಗುತ್ತದೆ.

ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳದ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುತ್ತದೆ. ಚಾಲನಾ ಸಿಬ್ಬಂದಿ ತಾವು ನಿವೃತ್ತಿ ಹೊಂದಿದ ವಿಭಾಗದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶಿಸಿದ್ದಾರೆ. ದೈಹಿಕವಾಗಿ ಚಾಲನಾ ಮತ್ತು ನಿರ್ವಾಹಕ ವೃತ್ತಿ ಮಾಡಲು ಸಮರ್ಥರಿರುವ ಬಗ್ಗೆ ನಿಗಮದಲ್ಲಿ ನಿಗದಿಪಡಿಸಿರುವ ದೈಹಿಕ ಹಾಗೂ ದೃಷ್ಟಿ ಸಾಮಥ್ರ್ಯ ಪ್ರಮಾಣ ಪತ್ರ, ಜಿಲ್ಲಾ ವೈದ್ಯಾಧಿಕಾರಿಗಳಿಂದ ಕೋವಿಡ್ ನೆಗೆಟಿವ್ ವರದಿ ಪ್ರಮಾಣ ಪತ್ರ ಒದಗಿಸಬೇಕು.

ಚಾಲ್ತಿಯಲ್ಲಿರುವ ಭಾರೀ ವಾಹನ ಪರವಾನಗಿ ಮತ್ತು ನಿರ್ವಾಹಕ ಪರಾವನಗಿ ಹೊಂದಿರುವುದು ಕಡ್ಡಾಯ. ಪ್ರತಿದಿನದ ಕರ್ತವ್ಯಕ್ಕೆ ಚಾಲಕರಿಗೆ 800 ರೂ. ನಿರ್ವಾಹಕರಿಗೆ 700 ರೂ. ಗೌರವಧನ ಪಾವತಿಸಲಾಗುವುದು. ಒಪ್ಪಂದದ ಮೇಲೆ ನೇಮಕವಾದವರಿಗೆ ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯ ಇಲ್ಲ. ಹೆಚ್ಚುವರಿ ಆರ್ಥಿಕ ಅಥವಾ ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Facebook Comments