ಪಿಂಚಣಿಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರಿಂದ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ನ್ಯಾಯಯುತ ಪಿಂಚಣಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿವೃತ್ತ ನೌಕರರು ಫ್ರೀಡಂ ಪಾರ್ಕ್‍ನಲ್ಲಿಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಸಂಘದ ಅಧ್ಯಕ್ಷರಾದ ಶಂಕರ್‍ಕುಮಾರ್ ಮತ್ತು ನಂಜುಂಡೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ನಮಗೆ ನ್ಯಾಯಯುತ ಪಿಂಚಣಿ ಸಲ್ಲಿಕೆಯಾಗುತ್ತಿಲ್ಲ.

ಕೇಂದ್ರ ಸರ್ಕಾರವು 1995ರಲ್ಲಿ ಜಾರಿಗೆ ತಂದ (ಇಪಿಎಸ್ 95) ಪಿಂಚಣಿ ಯೋಜನೆಗೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ನೌಕರರಿಂದ ಭವಿಷ್ಯ ನಿಧಿಗೆ ಹಣದ ವಂತಿಗೆಯೂ ಕೂಡ ಸಲ್ಲಿಕೆಯಾಗಿದೆ. ಆದರೆ, 20ರಿಂದ 35 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿರುವ ನೌಕರರಿಗೆ ಕನಿಷ್ಠ ಒಂದು ಸಾವಿರ ರೂ.ಗಳಿಂದ ಗರಿಷ್ಠ 3 ಸಾವಿರ ರೂ.ಗಳ ಪಿಂಚಣಿ ಹಣವನ್ನು ಭವಿಷ್ಯ ನಿಧಿ ಪ್ರಾಧಿಕಾರ ನೀಡುತ್ತಿದೆ.

2016ರಲ್ಲಿ ಸುಪ್ರೀಂಕೋರ್ಟ್ ನ್ಯಾಯಯುತ ಪಿಂಚಣಿ ನೀಡುವಂತೆ ಭವಿಷ್ಯ ನಿಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಈ ಆದೇಶದಂತೆ ದೇಶಾದ್ಯಂತ ಹಲವಾರು ಸಂಸ್ಥೆಗಳ ನಿವೃತ್ತ ನೌಕರರಿಗೆ ಭವಿಷ್ಯ ನಿಧಿ ಪ್ರಾಧಿಕಾರ ಪಿಂಚಣಿ ನೀಡುತ್ತಿದೆ. ಆದರೆ, ಸಾರಿಗೆ ಸಂಸ್ಥೆಯ ನೌಕರರಿಗೆ ಮಾತ್ರ ನ್ಯಾಯಯುತ ಪಿಂಚಣಿಯನ್ನು ನೀಡುತ್ತಿಲ್ಲ.

ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನಿವೃತ್ತ ನೌಕರರ ಸಂಘದ ವತಿಯಿಂದ ಹಲವಾರು ಬಾರಿ ಧರಣಿ ನಡೆಸಿ ಪ್ರಾದೇಶಿಕ ಪಿಎಫ್ ಆಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾವು ಧರಣಿ, ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ
ನಮಗೆ ನ್ಯಾಯಯುತ ಪಿಂಚಣಿ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ನಮ್ಮ ಹಣ ನೌಕರರಿಂದ ಭವಿಷ್ಯನಿಧಿಗೆ ವಂತಿಗೆ ಸಲ್ಲಿಸಲಾಗಿದೆ. ಬೇರೆ ಇಲಾಖೆಗೆ ನೀಡಿದಂತೆ ನಮ್ಮ ಇಲಾಖೆಯ ನಿವೃತ್ತಿ ನೌಕರರಿಗೂ ನ್ಯಾಯಯುತ ಪಿಂಚಣಿ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ತಾರತಮ್ಯ ಏಕೆ ಎಂದು ಅವರು ಪ್ರಶ್ನಿಸಿದರು. ಈ ಇಳಿ ವಯಸ್ಸಿನಲ್ಲಿ ನಾವು ನಮ್ಮ ಪಿಂಚಣಿ ಪಡೆಯಲು ಹೋರಾಟ ಮಾಡಬೇಕಾಗಿರುವುದು ದುರದೃಷ್ಟಕರ ಎಂದು ನೋವು ತೋಡಿಕೊಂಡರು.

Facebook Comments