ಹಿಂದುಳಿದ ವರ್ಗಗಳ ಆಯೋಗದ ವರದಿ ಬಿಡುಗಡೆಗೆ ಎಚ್.ಎಂ.ರೇವಣ್ಣ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ರಾಜ್ಯ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಹಿರಿಯ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಆಗ್ರಹಿಸಿದರು. ಸಂವಿಧಾನದ ಮಹತ್ವ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು. ಇದಕ್ಕೆ 179 ಕೋಟಿ ರೂ. ನೀಡಲಾಗಿತ್ತು.

ಈ ವರದಿ ಇದೀಗ ಪೂರ್ಣಗೊಂಡಿದ್ದು, ಇದು ಕಸದ ಬುಟ್ಟಿ ಸೇರಿದೆಯೋ ಅಥವಾ ಎಲ್ಲಿದೆಯೋ ಗೊತ್ತಿಲ್ಲ. ಕೂಡಲೇ ಸರ್ಕಾರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು. ವರದಿ ಬಿಡುಗಡೆಯಾದರೆ ರಾಜ್ಯ ದಲ್ಲಿ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿ ದ್ದಾರೆ, ಅವರ ಶೈಕ್ಷಣಿಕ ಸ್ಥಿತಿಗತಿಗಳು ಬಹಿರಂಗ ಗೊಳ್ಳುತ್ತದೆ. ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲಿ ಎಂದು ರೇವಣ್ಣ ಮನವಿ ಮಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ನೀಡುವಂತೆ ಹಿಂದುಳಿದ ವರ್ಗ ಗಳಲ್ಲೂ ಸಾಕಷ್ಟು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಿದ್ದಾರೆ. ಅವರಿಗೂ ಕೂಡ ಮೀಸಲಾತಿ ಸಿಗುವಂತಾಗಬೇಕು ಎಂದು ಹೇಳಿದರು.  ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ,ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಜಾರಿಗೆ ತಂದಿದ್ದರೂ ಅದರ ಉದ್ದೇಶವೇ ಈಡೇರಿಲ್ಲ. ಈ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.

ಕಾರಜೋಳ ಅವರ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಅಯನೂರು ಮಂಜುನಾಥ್, ಜೆಡಿಎಸ್‍ನ ಬಸವರಾಜ್ ಹೊರಟ್ಟಿ ಮತ್ತಿತರರು, ಇಂದು ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡವರೇ ಪಡೆಯುತ್ತಿದ್ದಾರೆ. ಕೆಳಹಂತದವರಿಗೆ ಇದರ ಸೌಲಭ್ಯಗಳು ಸಿಗುತ್ತಿಲ್ಲ. ಪಡೆದುಕೊಂಡವರೇ ಮತ್ತೆ ಸವಲತ್ತು ಪಡೆಯುತ್ತಿದ್ದರೆ ಅದರ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದರು.

ಮಾತು ಮುಂದುವರೆಸಿದ ರೇವಣ್ಣ, ಎಸ್ಸಿ-ಎಸ್ಟಿ ಸಮುದಾಯಕ್ಕೆ ಇರುವಂತೆ ಹಿಂದುಳಿದ ವರ್ಗದವರಿಗೂ ರಾಜಕೀಯ ಮೀಸಲಾತಿ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.  ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಿಂದಲೂ ಅನೇಕ ಮಹನೀಯರು ಶ್ರಮಿಸಿದ್ದಾರೆ.

ನಾರಾಯಣಗುರು ಜ್ಯೋತಿ ರಾವ್ ಬಾಪುಲೆ, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರು, ಎಲ್.ಜಿ. ಹಾವನೂರು, ಮಂಡಲ್, ರಾಜೀವ್‍ಗಾಂಧಿ, ಪಿ.ವಿ.ನರಸಿಂಹರಾವ್ ಸೇರಿದಂತೆ ಅನೇಕರು ಹೋರಾಟ ನಡೆಸಿದ್ದಾರೆ ಹೋರಾಟದ ಪರಿಣಾಮ ಇಂದು ಹಿಂದುಳಿದ ವರ್ಗದವರಿಗೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೊದಲ ಆಯೋಗ 1953ರಲ್ಲಿ ಕಾಕ ಕಾಲೇಕರ್ ನೇತೃತ್ವದಲ್ಲಿ ರಚನೆಯಾಯಿತು. 1955ರಲ್ಲಿ ವರದಿ ನೀಡಿದರೂ ಇದು ಅನುಷ್ಠಾನವಾಗಲಿಲ್ಲ ಎಂದು ವಿಷಾದಿಸಿದರು.  1979ರಲ್ಲಿ 2ನೇ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿ 1980ರಲ್ಲಿ ವರದಿ ಸಲ್ಲಿಕೆಯಾಯಿತು. ಹಿಂದುಳಿದ ವರ್ಗ ಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.27ರಷ್ಟು ಮೀಸಲಾತಿ ನೀಡುವ ಈ ವರದಿಯನ್ನು 1993ರಲ್ಲಿ ಅಂದಿನ ಪ್ರಧಾನಿ ದಿ.ಪಿ.ವಿ.ನರಸಿಂಹರಾವ್ ಅವರು ಜಾರಿ ಮಾಡಿದರು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಎಲ್.ಜಿ. ಹಾವನೂರು ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಶ್ರಮಿಸಿದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದೇ ಈ ಆಯೋಗ. ಎಲ್.ಜಿ.ಹಾವನೂರು ಆಯೋಗ ಒಂದು ರೀತಿ ಬೈಬಲ್, ಕುರಾನ್, ರಾಮಾಯಣ ಮತ್ತು ಮಹಾಭಾರತದಂತಿದೆ ಎಂದು ಪ್ರಶಂಸಿಸಿದರು.

ವೆಂಕಟಸುಬ್ಬಯ್ಯ ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳು ರಚನೆಯಾದರೂ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ. ಸಮಾಜದಲ್ಲಿ ಈಗಲೂ ಕೂಡ ಅಸ್ಪೃಶ್ಯತೆ ಜಾರಿಯಲ್ಲಿದೆ. ಸಮಸಮಾಜ ನಿರ್ಮಾಣ ಮಾಡಬೇಕೆಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ರೇವಣ್ಣ ಸಲಹೆ ಮಾಡಿದರು.

Facebook Comments