ಬಿಬಿಎಂಪಿಯ ಎಲ್ಲ ವಾರ್ಡ್‍ಗಳಲ್ಲೂ ಎರೆಹುಳು ಗೊಬ್ಬರ ಘಟಕ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲೂ ಎರೆಹುಳು ಗೊಬ್ಬರ ಘಟಕ ಸ್ಥಾಪಿಸುವುದರಿಂದ ನಗರದ ಕಸ ಸಮಸ್ಯೆಗೆ ಪರಿಹಾರ ಸಿಗುವುದರ ಜತೆಗೆ ರೈತರಿಗೆ ಉತ್ತಮ ಗೊಬ್ಬರ ದೊರೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡಿಯೂರು ವಾರ್ಡ್‍ನಲ್ಲಿ ರೈತ ಮಿತ್ರ, ಭೂಮಿ ಫಲವತ್ತತೆಗೆ ಆಧಾರವಾದ ಎರೆಹುಳು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರು ವಾರ್ಡ್‍ನಲ್ಲಿ ಪ್ರತಿದಿನ ಲಭ್ಯವಾಗುವ ಒಣ ಕಸದಿಂದ ಎರೆಹುಳು ಘಟಕ ಆರಂಭ ಮಾಡಲಾಗಿದೆ ಎಂದು ನಿಜಕ್ಕೂ ಒಳ್ಳೆಯದು ಎಂದು ಹೇಳಿದರು.

ಇಲ್ಲಿ ಉತ್ಪತ್ತಿಯಾಗುವ ಎರೆಹುಳು ಗೊಬ್ಬರವನ್ನು ಸ್ಥಳೀಯ ನಾಗರಿಕರಿಗೆ ಮನೆ ಮುಂದೆ ಇರುವ ಗಿಡ-ಮರಗಳಿಗೆ ಹಾಗೂ ರೈತರಿಗೆ ವಿತರಿಸಲಾಗುವುದು. ಇದರಿಂದಾಗಿ ಬಹಳಷ್ಟು ಕಸದ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಎಲ್ಲ ವಾರ್ಡ್‍ನಲ್ಲೂ ಘಟಕ: ಮಹಾಪೌರರಾದ ಗೌತಮ್ ಕುಮಾರ್ ಮಾತನಾಡಿ, ಎರೆಹುಳು ಘಟಕವನ್ನು ಪ್ರತಿ ವಾರ್ಡ್‍ನಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ಪರಿಸರ ಉಪಯುಕ್ತ ಹಸಿ ಕಸ, ಒಣ ಕಸದಿಂದ ಗೊಬ್ಬರ ತಯಾರಿಕೆ ಘಟಕಗಳನ್ನು 110 ಹಳ್ಳಿ ವಾರ್ಡ್‍ಗಳಲ್ಲಿ ವಿಸ್ತರಿಸಲಾಗುವುದು ಎಂದು ಹೇಳಿದರು. ಬಿಜೆಪಿ ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಎನ್.ಆರ್.ರಮೇಶ್ ಮಾತನಾಡಿ, ಯಡಿಯೂರು ವಾರ್ಡ್‍ನನಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಎರೆಹುಳು ಘಟಕ ಆರಂಭವಾಗಿದೆ. ಎರೆಹುಳುವನ್ನು ರೈತನ ಮಿತ್ರ ಎಂದು ಕರೆಯುತ್ತಾರೆ. ರೈತನಂತೆ ಎರೆಹುಳು ಭೂಮಿಯಲ್ಲಿ ನಿರಂತರ ಕೆಲಸ ಮಾಡುತ್ತಿರುತ್ತದೆ ಎಂದರು.

ರಾಸಾಯನಿಕ ಮುಕ್ತ ಹಾಗೂ ಭೂಮಿಯ ಸಾಂದ್ರತೆ ಹೆಚ್ಚಿಸಲು ಎರೆಹುಳು ಗೊಬ್ಬರ ಉತ್ತಮವಾಗಿದೆ. ರೈತನ ಬೆಳೆಯಲ್ಲಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮುನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಎರೆಹುಳು ಗೊಬ್ಬರದಿಂದ ಸಾವಯುವ ಆಹಾರ, ಹಣ್ಣುಗಳು, ಹೆಚ್ಚಿನ ಇಳುವರಿ ಮತ್ತು ಭೂಮಿಯ ಫಲವತ್ತತೆ ಹೆಚ್ಚುತ್ತದೆ, ಪರಿಸರ ಸಹ ಉಳಿಯುತ್ತದೆ ಎಂದು ತಿಳಿಸಿದರು. ಇಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ನಗರದ ಪಾರ್ಕ್‍ಗಳಿಗೆ ಮಾರಾಟ ಮಾಡಲಾಗುವುದು ಎಂದು ಇದೇ ವೇಳೆ ಎನ್.ಆರ್. ರಮೇಶ್ ತಿಳಿಸಿದರು.

ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಪಾಲಿಕೆ ಆಯುಕ್ತ ಬಿ.ಹೆಚ್.ಆನಿಲ್ ಕುಮಾರ್, ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.  ಎರೆಹುಳು ಗೊಬ್ಬರ ಉತ್ಪಾದನೆ ಹೇಗೆ? ಭೂಮಿಯಲ್ಲಿ ನೀರಿನ ಇಂಗುವಿಕೆ ಕಾರ್ಯ, ಸಸಿಗಳು ಮತ್ತು ಗಿಡಗಳ ಬೇರುಗಳು ಭೂಮಿಯಲ್ಲಿ ಆಳವಾಗಿ ಬೇರೂರುವಂತೆ ಮಾಡಲು ಮತ್ತು ಗಿಡಗಳಿಗೆ ಬೇಕಾದ ಯೂರಿಯಾವನ್ನು ಉತ್ಪತ್ತಿ ಮಾಡಿಕೊಳ್ಳಲು ಎರೆಹುಳುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 774 ಉದ್ಯಾನವನಗಳಲ್ಲಿ ಭೂಮಿಯ ಫಲವತ್ತತೆ ಹೆಚ್ಚಿಸುವ ಸಲುವಾಗಿ ಎರೆಹುಳುಗಳನ್ನು ಪೂರೈಸುವ ಕಾರ್ಯ ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಮಾದರಿ ವಾರ್ಡ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಡಿಯೂರು ವಾರ್ಡ್‍ನಲ್ಲಿ ಎರೆಹುಳು ಘಟಕವನ್ನು ಪಾಲಿಕೆಯ ವತಿಯಿಂದ ನಿರ್ಮಿಸಲಾಗಿದೆ.

ರೈತರಿಗೆ ಎರೆಹುಳುಗಳ ಅವಶ್ಯಕತೆ ಎಲ್ಲರಿಗಿಂತಲೂ ಅತೀ ಹೆಚ್ಚು ಇದ್ದು, ಪ್ರತಿ ಕೆಜಿ ಎರೆಹುಳುಗಳನ್ನು ಕೇವಲ 40 ರೂ.ಗಳಿಗೆ ಮಾರಾಟ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ರೈತರಿಗೆ ಈ ಎರೆಹುಳು ಘಟಕ ದಿಂದ ಬಹಳ ಉಪಯೋಗಕಾರಿಯಾಗಲಿದೆ.

ಯಡಿಯೂರು ವಾರ್ಡ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಮತ್ತು 17 ಉದ್ಯಾನವನಗಳಲ್ಲಿ ಇರುವ ಸಾವಿರಾರು ಮರಗಳಿಂದ ಪ್ರಾಕೃತಿಕವಾಗಿ ಉದುರುವ ಒಣ ಎಲೆಗಳನ್ನು ಒಟ್ಟಾಗಿ ಶೇಖರಿಸಿ, ಈ ಎರೆಹುಳು ಘಟಕದಲ್ಲಿ ನಿರ್ಮಿಸಿರುವ ತಲಾ 17,000 ಲೀಟರ್ ಸಾಮಥ್ರ್ಯದ ಎರಡು ತೊಟ್ಟಿಗಳಲ್ಲಿ ಸಂಗ್ರಹಿಸಿ, ಅದರೊಳಗೆ ತಲಾ 10 ಕೆಜಿ ಗಳಷ್ಟು ತೂಕದ ಎರೆಹುಳುಗಳನ್ನು ತೊಟ್ಟಿಗಳಲ್ಲಿ ಬಿಡಲಾಗುವುದು. ಇದರೊಂದಿಗೆ ಅಗತ್ಯ ಪ್ರಮಾಣದ ನೀರು ಮತ್ತು ಸಗಣಿ ಬೆರೆಸಲಾಗುವುದು.

20 ರಿಂದ 25 ದಿನಗಳೊಳಗಾಗಿ ಎರೆಹುಳುಗಳು ಒಣ ಎಲೆಗಳನ್ನು ತಿಂದು ಹಿಟ್ಟಿನ ರೂಪದ ಪುಡಿಯನ್ನು ಉತ್ಪಾದಿಸುತ್ತವೆ. ಈ ರೀತಿ ಎರೆಹುಳುಗಳಿಂದ ಉತ್ಪತ್ತಿಯಾಗುವ ಹಿಟ್ಟಿನ ರೂಪದ ಪದಾರ್ಥ ಅತ್ಯುತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

Facebook Comments