6 ವರ್ಷದ ಪೋರನ ಅದ್ವಿತೀಯ ಸಾಧನೆಯ ಗುರಿ
ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಬೆಂಗಳೂರಿನ 6 ವರ್ಷದ ಪುಟಾಣಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಜ್ಞಾಪಕ ಶಕ್ತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪೂರ್ವವಾದಂತಹ ಸಾಧನೆ ಮಾಡುವ ಹಾದಿಯಲ್ಲಿ ಸಾಗುತ್ತಿದ್ದಾನೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಾಗಿರುವ ಪ್ರಸನ್ನಕುಮಾರ್ ಮತ್ತು ರೀಕೇಶ್ವರಿ ಅವರ ಪುತ್ರ ರಿಶಿ ಶಿವ್ ಪ್ರಸನ್ನ ಕೋಡಿಂಗ್ನಲ್ಲಿ ಅಪ್ರತಿಮ ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟಿದ್ದು , ರೊಬೊಟಿಕ್ ತಂತ್ರಜ್ಞಾನದಲ್ಲೂ ತನ್ನ ಪ್ರೌಢಿಮೆಯನ್ನು ತೋರಿಸಿ ಎಲ್ಲರನ್ನು ಚಕಿತಗೊಳಿಸುವಂತೆ ಮಾಡುತ್ತಿದ್ದಾನೆ.
ನಾಲ್ಕೂವರೆ ವರ್ಷದಲ್ಲಿ ಕೋಡಿಂಗ್ ಕ್ಲಾಸ್ಗೆ ಸೇರಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಲವು ಬೆಳೆಸಿಕೊಂಡು ಹೊಸತನದ ಆವಿಷ್ಕಾರದ ತುಡಿತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು , ಈಗ ಅಂತಾರಾಷ್ಟ್ರೀಯ ಮಿನ್ಸಾ ಕ್ಲಬ್ ಆಯೋಜಿಸಿದ್ದ ಐಕ್ಯೂ ಆಫ್ 180 ಸ್ಪರ್ಧೆಯಲ್ಲಿ ಪಾಲ್ಗೊಂಡ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
4 ವರ್ಷ 11 ತಿಂಗಳ ಪ್ರಾಯದಲ್ಲಿಯೇ ರಿಷಿ ಐಕ್ಯೂ ಲೆವೆಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆಯುವುದರೊಂದಿಗೆ ಈಗ ಆ್ಯಂಡ್ರ್ಯಾಯ್ಡ್ನಲ್ಲಿ ಮೂರು ಹೊಸ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಗೂಗಲ್ ಪ್ಲೇ ಸ್ಟೋರ್ನಲ್ಲೂ ಕೂಡ ಈಗ ಅದು ದಾಖಲಾಗಿದೆ. ಇಡೀ ವಿಶ್ವಾದ್ಯಂತ ಮಕ್ಕಳು ಹೇಗೆ ಕೋವಿಡ್ ಸಂದರ್ಭದಲ್ಲಿ ಸಂಯಮ ಹಾಗೂ ಶಿಸ್ತು ಪಾಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದು ಒಳಗೊಂಡಿದೆ.
ಭಾರತದ ಒಟ್ಟು ಟಾಪ್-6 ಕೋಡಿಂಗ್ ವೈಟ್ ಹ್ಯಾಟ್ ಜೂನಿಯರ್ ಟೀಂನಲ್ಲೂ ಕೂಡ ರಿಷಿ ಶಿವ್ ಪ್ರಸನ್ನ ಸ್ಥಾನ ಪಡೆದಿದ್ದಾನೆ. ಐ ಕ್ಯೂನಲ್ಲಿ ಇಂಡಿಯನ್ ಬುಕ್ಸ್ ಆಫ್ ರೆಕಾಡ್ರ್ಸ್ನಲ್ಲೂ ಕೂಡ ಸ್ಥಾನ ಪಡೆದಿದ್ದು , ತನ್ನ ದೇಶ, ಮಾನವ ಸಂಕುಲದ ಉಪಯೋಗಕ್ಕಾಗಿ ಹೊಸ ದ್ರೋಣ್ ಟೆಕ್ನಾಲಜಿ ಅಡಿಯನ್ನು ಹೊಸ ಸಾಧನಾ ಆವಿಷ್ಕಾರಗೊಳಿಸುತ್ತಿದ್ದು , ಸಾಕಷ್ಟು ಪ್ರಗತಿ ಸಾಧಿಸಿದ್ದಾನೆ.
ಮನೆ ಮನೆಗೆ ಔಷಧಿ , ಆಹಾರ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸಬಹುದಾದಂತಹ ಈ ದ್ರೋಣ್ ತಯಾರಿಕೆಗೆ ಪ್ರಸ್ತುತ ಪೋಷಕರು ಉತ್ತೇಜನ ನೀಡುತ್ತಿದ್ದು , ರಾಜ್ಯ ಸರ್ಕಾರ ಹಾಗೂ ಪ್ರಾಯೋಜಕರ ಸಹಕಾರವನ್ನು ಕೋರಿದ್ದಾರೆ. ಕನ್ನಡಿಗರಾದ ನಾವು ಸ್ವಾಭಿಮಾನಿಗಳು ಅಂತೆಯೇ ನಾಡಿಗೆ ಸೇವೆ ಸಲ್ಲಿಸುವ ಛಲವಂತರು. ನನ್ನ ಪುತ್ರನ ಬಗ್ಗೆ ನನಗೆ ಹೆಮ್ಮೆ ಇದೆ.
ತಂತ್ರಜ್ಞಾನ, ಆವಿಷ್ಕಾರ ಎಂಬುದು ಸಾಮಾನ್ಯದ ಮಾತಲ್ಲ. ದೇವರ ಕೃಪೆಯಿಂದಲೇ ಇಂತಹ ಜ್ಞಾನ ಲಭಿಸಿದೆ. ಇದನ್ನು ಪೋಷಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ತಾಯಿ ರೀಕೇಶ್ವರಿ.