ಚೀನಾಗೆ ಮತ್ತೊಂದು ಆರ್ಥಿಕ ಹೊಡೆತ, ವಿದ್ಯುತ್ ಉಪಕರಣಗಳ ಮೇಲೆ ಸಂಪೂರ್ಣ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.3- ಗಡಿ ಭಾಗಗಳಲ್ಲಿ ಪದೇ ಪದೇ ಉಪಟಳ ನೀಡುತ್ತಿರುವ ಚೀನಾಗೆ ತಕ್ಕಪಾಠ ಕಲಿಸಲು ದೃಢ ನಿಶ್ಚಯ ಮಾಡಿರುವ ಭಾರತ ಕಮ್ಯುನಿಸ್ಟ್ ರಾಷ್ಟ್ರಕ್ಕೆ ಮತ್ತೊಂದು ಆರ್ಥಿಕ ಹೊಡೆತ ನೀಡಿದೆ.

ಇನ್ನು ಮುಂದೆ ಚೀನಾದಿಂದ ಯಾವುದೇ ವಿದ್ಯುತ್ ಉಪಕರಣಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವುದಿಲ್ಲ. ಅಂತಹ ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಾಗಿ ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ.ಸಿಂಗ್ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೀನಾ ಮತ್ತು ಪಾಕಿಸ್ತಾನದ ವಿದ್ಯುತ್ ಉಪಕರಣಗಳು ಮತ್ತು ಸಾಧನಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಉಪಕರಣಗಳು ಮತ್ತು ಸಾಧನ-ಸಲಕರಣೆಗಳನ್ನು ನಾವೇ ದೇಶದಲ್ಲಿ ತಯಾರಿಸಲು ಆದ್ಯತೆ ನೀಡಲಾಗುತ್ತಿದ್ದು, ಸಂಪೂರ್ಣ ಸ್ವಾವಲಂಬನೆ ಸಾಧಿಸುವುದಾಗಿ ಅವರು ತಿಳಿಸಿದರು.

ಚೀನಾದ ವಿದ್ಯುತ್ ಉಪಕರಣಗಳ ಗುಣಮಟ್ಟದ ಬಗ್ಗೆ ನಮಗೆ ತೀವ್ರ ಅಸಮಾಧಾನವಿದೆ. ಅಲ್ಲಿನ ಪವರ್ ಎಕ್ಯುಪ್‍ಮೆಂಟ್‍ಗಳ ಆಮದನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ ಎಂದು ಆರ್.ಕೆ.ಸಿಂಗ್ ತಿಳಿಸಿದರು.

ಈಗಾಗಲೇ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ದೇಶವ್ಯಾಪಿ ಆಂದೋಲನ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾಕ್ಕೆ ಮತ್ತೊಂದು ಆಘಾತ ನೀಡಿದೆ.

Facebook Comments