ಕೆಎಸ್‌ಆರ್‌ಟಿಸಿ-ಖಾಸಗಿ ಬಸ್ ನಡುವೆ ಅಪಘಾತ, 4 ಪ್ರಯಾಣಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident-01
ತುಮಕೂರು/ಶಿರಾ, ಆ.28- ಕೆಎಸ್‍ಆರ್‍ಟಿಸಿ ಬಸ್ ಮತ್ತು ಖಾಸಗಿ ಬಸ್‍ಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಹಾಯಕ ಸಬ್ ಇನ್‍ಸ್ಪೆಕ್ಟರ್ ಸೇರಿದಂತೆ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿ 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಬಸ್‍ನಲ್ಲಿದ್ದ ಕಾರವಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‍ಸ್ಪೆಕ್ಟರ್ ಕೆ ರಮೇಶ್ (55) ಹಾಗೂ ನಿಖಿತಾ (35), ಖಾಸಗಿ ಬಸ್ ಚಾಲಕ ಧನರಾಜ್(54) ಎಂಬುವವರು ಮೃತಪಟ್ಟಿದ್ದು, ಕೆಎಸ್‍ಆರ್‍ಟಿಸಿ ಬಸ್‍ನಲ್ಲಿದ್ದ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದು, ಅವರ ಹೆಸರು ತಿಳಿದುಬಂದಿಲ್ಲ.

ರಾಷ್ಟ್ರೀಯ ಹೆದ್ದಾರಿ 48ರ ಶಿರಾ ತುಮಕೂರು ಮಾರ್ಗದ ಕಳ್ಳಂಬೆಳ್ಳ ಪೊಲೀಸ್ ಠಾಣೆ ಮುಂಭಾಗವೇ ಮುಂಜಾನೆ 5.15ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸನ್ನು ಓವರ್ ಟೇಕ್ ಮಾಡಲು ಮುಂದಾದ ಖಾಸಗಿ ಸಂಸ್ಥೆಯ ಸಿಬರ್ಡ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸಿಬರ್ಡ್ ಬಸ್ ಚಾಲಕ ಮತ್ತು ಮುಂಭಾಗ ಕುಳಿತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಹಿಂಬದಿಯಲ್ಲಿದ್ದ ಒಬ್ಬ ಪ್ರಯಾಣಿಕ ಕೂಡ ಮೃತ ಪಟ್ಟಿದ್ದಾರೆ. ಅವರ ಹೆಸರು ಇನ್ನಷ್ಟೇ ತಿಳಿದುಬರಬೇಕಿದೆ. ಎರಡೂ ಬಸ್‍ಗಳಲ್ಲಿದ್ದ 15 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Accident-02

ಡಿಕ್ಕಿಯ ರಭಸದಿಂದ ಉಂಟಾದ ಶಬ್ದಕ್ಕೆ ಇಡೀ ಗ್ರಾಮದ ಜನರು ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಎರಡೂ ಬಸ್‍ಗಳಲ್ಲಿದ್ದ ಪ್ರಯಾಣಿಕರ ಚೀರಾಟವನ್ನು ನೋಡಿ ಗ್ರಾಮಸ್ಥರು ಮಮ್ಮಲ ಮರಗಿ ಅವರನ್ನು ಉಪಚರಿಸಿದ್ದಾರೆ.  ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗಾಯಾಳುಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆ ಹಾಗು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.

# ಮಾನವೀಯತೆ ಮೆರೆದ ವೃತ್ತ ನಿರೀಕ್ಷಕ, ಗ್ರಾಮಸ್ಥರು 
ರಾತ್ರಿ ಗಸ್ತಿನಲ್ಲಿದ್ದ ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸುದರ್ಶನ್ ಅಪಘಾತದ ಸುದ್ದಿ ತಿಳಿದ ಕೊಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಅಪಘಾತದಿಂದ ರಸ್ತೆಯಲ್ಲಿ ಒಂದು ಕಿಲೋಮೀಟರ್ ಉದ್ದಕ್ಕೂ ವಾಹನಗಳು ನಿಂತಿದ್ದವು. ತಕ್ಷಣ ಪ್ರವೃತ್ತರಾದ ಅವರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಸಾರ್ವಜನಿಕರು ಕೂಡ ಅವರೊಂದಿಗೆ ಕೈಜೋಡಿಸಿದ್ದಾರೆ. ಸುದರ್ಶನ್ ಅವರ ಕಾಳಜಿಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.  ಸ್ಥಳಕ್ಕೆ ಶಿರಾ ಗ್ರಾಮಾಂತರ ಡಿವೈಎಸ್‍ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಕಳ್ಳಂಬೆಳ್ಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin