ಬೆಂಗಳೂರಿಗರೇ ಹುಷಾರ್, ಸಿಲಿಕಾನ್ ಸಿಟಿ ಸೇಫ್ ಅಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.4- ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ನಂದಿನಿಲೇಔಟ್ ಹಾಗೂ ಓಕಳಿಪುರಂನ ಕೆಳ ಸೇತುವೆ ಬಳಿ ದಾರಿಹೋಕರಿಗೆ ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿರುವ ಪ್ರಕರಣ ರಾತ್ರಿ ವರದಿಯಾಗಿದೆ. ಡಿಯೋ ಮತ್ತು ಆ್ಯಕ್ಟಿವಾ ದ್ವಿಚಕ್ರ ವಾಹನಗಳಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಂದಿನಿಲೇಔಟ್‍ನ ಎಸ್‍ಎಲ್‍ವಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ರಾತ್ರಿ 11.30ರ ಸುಮಾರಿನಲ್ಲಿ ಹರೀಶ್ ಬಾಬು ಎಂಬುವರಿಗೆ ಚಾಕು ತೋರಿಸಿ ಬೆದರಿಸಿ 30 ಗ್ರಾಂ ಚಿನ್ನದ ಸರವನ್ನು ದರೋಡೆ ಮಾಡಿದ್ದಾರೆ.

ಬಳಿಕ ಇದೇ ಆರೋಪಿಗಳು ಓಕಳಿಪುರಂನ ಕೆಳ ಸೇತುವೆ ಬಳಿ ಬಂದಿದ್ದು, ಅಲ್ಲಿ ಇನೋವಾ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರನ್ನು ಬೆದರಿಸಿ 25 ಗ್ರಾಂ ಚಿನ್ನದ ಸರ ಕಸಿದು ಹೋಗಿದ್ದಾರೆ. ಮೈಸೂರಿನವರಾದ ಪುನೀತ್ ಅವರು ತಮ್ಮ ಪತ್ನಿಯನ್ನು ಬಸವೇಶ್ವರನಗರದಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ತಮ್ಮೊಂದಿಗೆ ಬಂದಿದ್ದ ಸ್ನೇಹಿತ ಮನು ಎಂಬುವರನ್ನು ಮಹದೇವಪುರದಲ್ಲಿರುವ ಆತನ ಮನೆಗೆ ಬಿಟ್ಟು ಬರಲು ಇನೋವಾ ಕಾರಿನಲ್ಲಿ ಹೋಗುತ್ತಿದ್ದರು.

ಈ ನಡುವೆ ಓಕಳಿಪುರಂ ಕೆಳ ಸೇತುವೆ ಬಳಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಅಲ್ಲಿಗೆ ಆ್ಯಕ್ಟಿವಾ ಹಾಗೂ ಡಿಯೋದಲ್ಲಿ ಬಂದ ದರೋಡೆಕೋರರು ಪುನೀತ್‍ನನ್ನು ಹೆದರಿಸಿ ದರೋಡೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮನು ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ತಕ್ಷಣವೇ ಆರೋಪಿಗಳು ಚಾಕುವಿನಿಂದ ಮನುವಿನ ಮೇಲೆ ದಾಳಿ ಮಾಡಿದ್ದು, ಕೈಗೆ ಗಾಯವಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಂದಿನಿಲೇಔಟ್ ಹಾಗೂ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ದರೋಡೆಪ್ರಕರಣಗಳು ದಾಖಲಾಗಿವೆ. ಎರಡೂ ಪ್ರಕರಣಗಳಲ್ಲೂ ಒಂದೇ ಗ್ಯಾಂಗ್ ಅಪರಾಧ ಎಸಗಿದೆ ಎಂದು ಸಿಸಿ ಟಿವಿ ಪರಿಶೀಲನೆ ವೇಳೆ ಖಚಿತವಾಗಿದೆ.

# ಸ್ನೇಹಿತನ ಚಿಕಿತ್ಸೆಗೆ ಹಣ ಹೊಂದಿಸಲು ಸರಗಳ್ಳತನ, ಇಬ್ಬರ ಬಂಧನ

ಕ್ಯಾನ್ಸರ್‍ಗೆ ತುತ್ತಾಗಿದ್ದ ಸ್ನೇಹಿತನಿಗೆ ಚಿಕಿತ್ಸೆ ಕೊಡಿಸಲು ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಮಳವಳ್ಳಿಯ ಮಂಜುನಾಥ್, ಮೈಸೂರಿನ ನರಸೀಪುರದ ಮರಿಸ್ವಾಮಿ ಬಂಧಿತ ಆರೋಪಿಗಳು. ವಿವಿಪುರಂನ ಸಜ್ಜನ್‍ರಾವ್ ರಸ್ತೆ ಬಳಿ ಈ ಇಬ್ಬರು ಯುವಕರು ನಿಂತಿದ್ದರು. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಎಎಸ್‍ಐ ಶಿವಕುಮಾರ್ ಅನುಮಾನದ ಮೇಲೆ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಗದರಿಸಿ ಕೇಳಿದಾಗ ಆರೋಪಿಗಳು ಹೇಳಿದ ಕಥೆ ಪೊಲೀಸರ ಮನವನ್ನು ಕಲಕಿದೆ. ಈ ಆರೋಪಿಗಳಿಬ್ಬರ ಸ್ನೇಹಿತ ಕ್ಯಾನ್ಸರ್‍ಗೆ ತುತ್ತಾಗಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಲು ಹಣವಿರಲಿಲ್ಲ. ಹಣ ಹೊಂದಿಸಲು ಸಾಕಷ್ಟು ಪರದಾಡಿದ ಬಳಿಕ ಅಂತಿಮವಾಗಿ ಕಳ್ಳತನ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಚಾಮರಾಜನಗರದ ಗಣಗನೂರು ಗ್ರಾಮದ ಅಂಗಡಿ ಬಳಿ ನಿಂತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರವನ್ನು ದ್ವಿಚಕ್ರ ವಾಹನದಲ್ಲಿ ಹೋಗಿ ಕದ್ದು ತಂದಿದ್ದಾರೆ. ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಸ್ನೇಹಿತನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.

ಪೊಲೀಸರು ಗದರಿಸಿ ಕೇಳಿದಾಗ ಜೇಬಿನಲ್ಲಿದ್ದ ಮಾಂಗಲ್ಯಸರ ತೆಗೆದು ತೋರಿಸಿ ಕಳ್ಳತನದ ಕಹಾನಿಯನ್ನು ವಿವರಿಸಿದ್ದಾರೆ. ಆರೋಪಿಗಳಿಂದ 40 ಗ್ರಾಂ ಮಾಂಗಲ್ಯದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments