ಅಟಿಕಾ ಗೋಲ್ಡ್ ಕಂಪನಿಗೆ ಸೇರಿದ 25ಲಕ್ಷ ದರೋಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.14- ವಿಜಯವಾಡಕ್ಕೆ ತೆಗೆದುಕೊಂಡು ಹೋಗುತ್ತಿದ್ದ 25 ಲಕ್ಷ ಹಣವನ್ನು ದರೋಡೆಕೋರರು ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಅಟಿಕಾ ಗೋಲ್ಡ್ ಕಂಪನಿಯ ಕ್ಯಾಶಿಯರ್ ಸಂತೋಷ್ ಈ ಬಗ್ಗೆ ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರದ ಕ್ವೀನ್ಸ್‍ರಸ್ತೆಯ ಇಂಡಿಯನ್ ಎಕ್ಸ್‍ಪ್ರೆಸ್ ಕಟ್ಟಡದಲ್ಲಿ ಅಟಿಕಾ ಗೋಲ್ಡ್ ಕಂಪನಿಯ ಶಾಖೆ ಇದೆ. ಈ ಶಾಖೆಯಲ್ಲಿ 25 ಲಕ್ಷ ಹಣ ಸಂಗ್ರಹಿಸಲಾಗಿತ್ತು. ಈ ಹಣವನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಮುಖ್ಯ ಕಚೇರಿಗೆ ಕೊಂಡೊಯ್ಯುವ ಸಲುವಾಗಿ ಕಂಪನಿಯ ಕ್ಯಾಶಿಯರ್ ಸಂತೋಷ್, ಸೆಕ್ಯೂರಿಟಿ ಗಾರ್ಡ್‍ನೊಂದಿಗೆ ವಿಜಯವಾಡಕ್ಕೆ ತೆರಳಲು ರಾತ್ರಿ 11.45ರ ಸುಮಾರಿನಲ್ಲಿ ಹಳೇಮದ್ರಾಸ್ ರಸ್ತೆಯ ಟಿನ್‍ಫ್ಯಾಕ್ಟರಿ ಬಳಿ ಬಸ್‍ಗಾಗಿ ಕಾಯುತ್ತಿದ್ದರು.

ಈ ವೇಳೆ ಐದಾರು ಮಂದಿ ದರೋಡೆಕೋರರು ಬೈಕ್‍ಗಳಲ್ಲಿ ಇವರ ಬಳಿ ಬಂದು ಹೆದರಿಸಿ ಅವರ ಕೈಯಲ್ಲಿದ್ದ 25 ಲಕ್ಷ ರೂ.ಗಳಿದ್ದ ಬ್ಯಾಗ್‍ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ತಕ್ಷಣ ಸಂತೋಷ್ ರಾಮಮೂರ್ತಿನಗರ vಲೀಸರಿಗೆ ವಿಷಯ ತಿಳಿಸಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಎಲ್ಲಾ ಕಡೆ ನಾಕಾಬಂಧಿ ಮಾಡಿ ದರೋಡೆಕೋರರಿಗಾಗಿ ಶೋಧ ನಡೆಸಿದರಾದರೂ ಸುಳಿವು ಸಿಕ್ಕಿಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin