ಕನ್ನಗಳವು :3.85 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ದ್ವಿಚಕ್ರ ವಾಹನ ಕಳವು ಹಾಗೂ ಹಗಲು ವೇಳೆ ಕಳ್ಳತನ, ದರೋಡೆ ಮಾಡುತ್ತಿದ್ದ ವ್ಯಕ್ತಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿ 3.85 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ತಮಿಳುನಾಡಿನ, ನಗರದ ಕಾಮಾಕ್ಷಿಪಾಳ್ಯದಲ್ಲಿ ವಾಸಿಸುತ್ತಿದ್ದ ಗಣೇಶ್ ಅಲಿಯಾಸ್ ಗಣಿ(24) ಬಂಧಿತ ಆರೋಪಿ.
ಜ.12ರಂದು ಸಂಜೆ 6.30ರಲ್ಲಿ ಆಚಾರ್ಯ ಕಾಲೇಜ್ ಹತ್ತಿರ ಸೋಲದೇವನಹಳ್ಳಿ ಠಾಣೆ ಪೊಲೀಸರು ವಾಹನ ತಪಾಸಣೆ ಮಾಡುವಾಗ ಗಣಪತಿನಗರದ ಕಡೆಯಿಂದ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯನ್ನು ತಡೆದಿದ್ದಾರೆ.

ವಾಹನದ ದಾಖಲಾತಿಗಳನ್ನು ತೋರಿಸುವಂತೆ ಕೇಳಿದಾಗ, ಈತನ ಬಳಿ ಯಾವುದೇ ದಾಖಲಾತಿಗಳು ಇಲ್ಲದೆ ಇದ್ದರಿಂದ ಈತನನ್ನು ಠಾಣೆಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಾಹನ ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿ ಗಣೇಶ್ ನೀಡಿದ ಮಾಹಿತಿ ಮೇರೆಗೆ ಸುಮಾರು 3.85 ಲಕ್ಷ ರೂ. ಬೆಲೆ ಬಾಳುವ 57 ಗ್ರಾಂ ತೂಕದ ಚಿನ್ನಾಭರಣ ಮತ್ತು ವಿವಿಧ ಕಂಪನಿಯ 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಗಣೇಶ್ ಈ ಹಿಂದೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ-2, ಕಾಮಾಕ್ಷಿಪಾಳ್ಯ-1, ವಿಜಯನಗರ ಪೊಲೀಸ್ ಠಾಣೆಯ-2 ದರೋಡೆಗೆ ಸಂಚು ಪ್ರಕರಣಗಳಲ್ಲಿ ಹಾಗೂ ವಿಜಯನಗರ ಪೊಲೀಸ್ ಠಾಣೆಯ 1-ಸುಲಿಗೆ ಪ್ರಕರಣ ಮತ್ತು 4-ವಾಹನಗಳ ಜಖಂಗೊಳಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

2020ನೇ ಸಾಲಿನಲ್ಲಿ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿದ್ದು, ನವೆಂಬರ್ 12ರಂದು ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದನು.

ಆರೋಪಿಯ ಬಂಧನದಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆ-1 ಹಗಲು ಕನ್ನಾ ಕಳವು, ತುಮಕೂರು ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣೆ-1, ವಿಜಯನಗರ ಪೊಲೀಸ್ ಠಾಣೆ-1, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ-1, ದ್ವಿಚಕ್ರವಾಹನ ಕಳವು ಪ್ರಕರಣ ಒಟ್ಟು 4 ಪ್ರಕರಣಗಳು ಪತ್ತೆಯಾಗಿರುತ್ತವೆ.

Facebook Comments