ಕಾಬೂಲ್‍ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ರಾಕೆಟ್ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಸೆ.11- ಹಿಂಸಾಚಾರ ಪೀಡಿತ ಆಫ್ತಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ರಾಜಧಾನಿ ಕಾಬೂಲ್‍ನಲ್ಲಿರುವ ಅಮೆರಿಕ ರಾಯಭಾರೀ ಕಚೇರಿ ಬಳಿ ಬಂಡುಕೋರರು ರಾಕೆಟ್ ಸ್ಪೋಟಿಸಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ.  ಈ ಸ್ಫೋಟದಲ್ಲಿ ಸಾವು-ನೋವು ಅಥವಾ ಭಾರೀ ಹಾನಿಯ ವರದಿಗಳಾಗಿಲ್ಲ.

ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ ದಾಳಿಗೆ 18ನೇ ಕರಾಳ ವರ್ಷಾಚರಣೆಗೆ ಮುನ್ನವೇ ಎಂಬೆಸ್ಸಿ ಕಾರ್ಯಾಲಯದ ಸಮೀಪ ಈ ರಾಕೆಟ್ ದಾಳಿ ನಡೆದಿದೆ. ಅಮೆರಿಕ ರಾಯಭಾರಿ ಕಚೇರಿ ಸಮೀಫವೇ ನ್ಯಾಟೋ ಕಾರ್ಯಾಲಯ ಸಹ ಇದೆ.

ನಿನ್ನೆ ಮಧ್ಯರಾತ್ರಿ ನಂತರ ರಾಕೆಟ್ ಸ್ಫೋಟಗೊಂಡಿತು. ನಂತರ ಎಚ್ಚರಿಕೆ ಸಂದೇಶದ ಸೈರನ್ ಮೊಳಗಿತ್ತು. ಧ್ವನಿವರ್ಧಕಗಳ ಮೂಲಕ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಲಾಯಿತು. ರಾಕೆಟ್ ಸ್ಫೋಟದಿಂದ ದಟ್ಟ ಹೊಗೆ ಮೇಲೆಳುತ್ತಿದ್ದ ದೃಶ್ಯ ಕಂಡು ಬಂದಿತು.

ತಾಲಿಬಾನ್ ಉಗ್ರರೊಂದಿಗೆ ಶಾಂತಿ ಮಾತುಕತೆಯ ಬಾಗಿಲು ಬಂದ್ ಮಾಡಿರುವ ಅಮೆರಿಕ ವಿರುದ್ಧ ದಾಳಿಗಳನ್ನು ನಡೆಸುವುದಾಗಿ ನಿನ್ನೆಯಷ್ಟೇ ಬಂಡುಕೋರರು ಎಚ್ಚರಿಕೆ ನೀಡಿದ್ದರು.
ಕಳೆದ ವಾರ ಕಾಬೂಲ್‍ನಲ್ಲಿ ತಾಲಿಬಾನ್ ಉಗ್ರರು ಕಾರ್ ಬಾಂಬ್‍ಗಳನ್ನು ಸ್ಫೋಟಿಸಿ ನ್ಯಾಟೋದ ಇಬ್ಬರು ಯೋಧರೂ ಸೇರಿದಂತೆ ಅಣೇಕರನ್ನು ಕೊಂದಿದ್ದರು.

Facebook Comments