ಚಿತ್ರರಂಗದ 3000 ತಂತ್ರಜ್ಞರು, ಕಾರ್ಮಿಕರಿಗೆ ತಲಾ ₹5000 ಪರಿಹಾರ ಘೋಷಿಸಿದ ನಟ ಯಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಚಲನಚಿತ್ರರಂಗದಲ್ಲಿರುವ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿ ಹಾಕುವುದಾಗಿ ರಾಕಿಂಗ್ ಸ್ಟಾರ್ ಯಶ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು,ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಡಿಮೆ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯವಾಗಿದೆ ಎಂದಿದ್ದಾರೆ.

ಸುಮಾರು 3 ಸಾವಿರಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ಐದು ಸಾವಿರ ರೂಪಾಯಿಗಳನ್ನು ನನ್ನ ಸಂಪಾದನೆಯಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು, ಪ್ರಧಾನ ಕಾರ್ಯದರ್ಶಿ ರವಿಂದ್ರನಾಥ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ನಮ್ಮ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ, ಬದಲಿಗೆ ಶಕ್ತಿ ಇರುವ ಹೃದಯವಂತರೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಆಹಾರದ ಕಿಟ್ ಗಳನ್ನ ವಿತರಣೆ ಮಾಡಿ ಫೋಟೋ, ವಿಡಿಯೋ ಮಾಡಿಸಿಕೊಂಡು ಪ್ರಚಾರ ತೆಗೆದುಕೊಂಡವರು, ಅದನ್ನು ಟೀಕಿಸುತ್ತಲೇ ಪ್ರಚಾರ ಪಡೆದವರ ನಡುವೆ ಕೆಜಿಎಫ್ ಚಿತ್ರದ ನಾಯಕ ಯಶ್ ಅವರ ಉಪಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಗಳು ಲಾಕ್ ಡೌನ್ ಸಂದರ್ಭದಲ್ಲಿ ತಾವು ತಮ್ಮ ಕುಟುಂಬ ಎಂದು ಅವಿತು ಕುಳಿತಿರುವಾಗ ಯಶ್ ಚಿತ್ರರಂಗವೇ ನನ್ನ ಕುಟುಂಬ, ಅಲ್ಲಿ ದುಡಿಯುವ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ನನ್ನ ಕುಟುಂಬದ ಸದಸ್ಯರು ಎಂದು ಸದ್ದಿಲ್ಲದೆ ಅವರ ಖಾತೆಗೆ ಐದು ಸಾವಿರ ರೂಪಾಯಿ ಹಾಕಲು ಮುಂದಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕುಟುಂಬಗಳಿಗೆ ಇದು ಸಾಕಷ್ಟು ಅನುಕೂಲವಾಗಿದೆ.

Facebook Comments