Thursday, April 25, 2024
Homeರಾಜ್ಯನನ್ನ ಕಲಾಸೇವೆ ಅತ್ಯಂತ ಕಿರಿದು, ಕರುನಾಡ ಪ್ರೀತಿ ಅತ್ಯಂತ ಹಿರಿದು : ಯಶ್

ನನ್ನ ಕಲಾಸೇವೆ ಅತ್ಯಂತ ಕಿರಿದು, ಕರುನಾಡ ಪ್ರೀತಿ ಅತ್ಯಂತ ಹಿರಿದು : ಯಶ್

ಕೆಂಗೇರಿ, ನ.23- ನನ್ನ ಕಲಾ ಸೇವೆ ಅತ್ಯಂತ ಕಿರಿದು. ನನಗೆ ದೊರೆತಿರುವ ಕರುನಾಡ ಪ್ರೀತಿ ಅತ್ಯಂತ ಹಿರಿದು ಎಂದು ರಾಕಿಂಗ್ ಸ್ಟಾರ್ ಯಶ್ ಇಂದಿಲ್ಲಿ ಹೇಳಿದರು. ಕೆಂಗೇರಿ ಬಳಿಯ ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿ ಕ್ಯಾಂಪಸ್‍ನಲ್ಲಿಂದು ನಡೆದ 15ನೆ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಮಾತ್ರ ಗಮನ ಹರಿಸಿ. ಅಕ್ಕ ಪಕ್ಕದವರ ತೆಗಳಿಕೆಗೆ ಬೆಲೆ ನೀಡಬೇಡಿ ಎಂದು ಸಲಹೆ ನೀಡಿದರು.

ನಿಮ್ಮ ಪ್ರಾಮಾಣಿಕ ಗುರಿಗೆ ಸಹಕಾರ ನೀಡುವವರ ಸಂಪರ್ಕದಲ್ಲಿರಿ. ನಾನು ಕೂಡ ನನ್ನ ಮನದ ಮಾತಿಗೆ ಮಾತ್ರ ಬೆಲೆ ನೀಡಿದ್ದೆ ಎಂದು ಹೇಳಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಮೊದಲು ಭೇಟಿ ಮಾಡಿದ ಸಂದರ್ಭ ಇನ್ನೂ ನನ್ನ ಮನದಲ್ಲಿ ಅಚ್ಚ ಹಸಿರಾಗಿದೆ. ಅವರ ದೂರದೃಷ್ಟಿ, ಶೈಕ್ಷಣಿಕ ದೃಷ್ಟಿಕೋನಗಳು, ಸಾಂಸ್ಕøತಿಕ ನಿಲುವುಗಳು ಅಂದೇ ನನ್ನ ಮನಸ್ಸು ಗೆದ್ದಿದ್ದವು ಎಂದು ಹೇಳಿದರು.

ಯಾರೋ ಒಬ್ಬರ ಶ್ರಮ, ಬದ್ಧತೆಯಿಂದ ಒಂದು ಉತ್ತಮ ಸಂಸ್ಥೆ ರೂಪುಗೊಳ್ಳಲು ಸಾಧ್ಯ. ಅದೇ ರೀತಿ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಅವಿರತ ಪ್ರಯತ್ನದಿಂದ ದೇಶದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಬಿಜಿಎಸ್ ರೂಪುಗೊಂಡಿದೆ ಎಂದು ಶ್ಲಾಘಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಇಲ್ಲಿ ನಮ್ಮ ಮಧ್ಯೆ ಇರುವ ನಟ ಯಶ್ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಹೆಸರಿನಲ್ಲೇ ಯಶಸ್ಸು ಇದೆ ಎಂದರು.

ಯಾವ ವ್ಯಕ್ತಿ ಗುರು- ಹಿರಿಯರನ್ನು ಗೌರವಿಸುತ್ತಾರೋ, ಅಬಲರಿಗೆ ಬೆಂಬಲ ನೀಡುತ್ತಾರೋ ಹಾಗೂ ಯಶಸ್ಸು ಬಂದಾಗ ಅಹಂಕಾರ ತೋರದೆ ತನ್ನ ಸುತ್ತಮುತ್ತಲಿನ ಜನರೊಂದಿಗೆ ಅದೇ ಸಾಮಾನ್ಯ ಬದುಕು ಸಾಗಿಸುವ ಮನಃಸ್ಥಿತಿ ಹೊಂದಿ ರುವರೋ ಅವರು ಯಶಸ್ಸು ಗಳಿಸಲು ಸಾಧ್ಯ ಎಂದರು.

ಯಾವುದೇ ಕ್ಷೇತ್ರದಲ್ಲಾದರೂ ಅವಿರತ ಪ್ರಯತ್ನ ಮಾಡಬೇಕು. ವಿಶೇಷ ಆವಿಷ್ಕಾರದಲ್ಲಿ ಚಿತ್ತ ಹರಿಸಬೇಕು. ಈ ನಿಟ್ಟಿನಲ್ಲಿ ಕಲೆ ಮತ್ತು ಸಂಸ್ಕøತಿಗೆ ಬೆಲೆ ನೀಡಬೇಕು. ಈ ನಿಟ್ಟಿನಲ್ಲಿ ಸಾಗುತ್ತಿರುವ ಯಶ್ ಅವರು ವರನಟ ರಾಜ್‍ಕುಮಾರ್ ಅವರಂತೆ ಸಾಧನೆಯ ಹಾದಿಯಲ್ಲಿದ್ದಾರೆ ಎಂದು ಅವರು ಶ್ಲಾಘಿಸಿದರು.

ಶಿಕ್ಷಣಕ್ಕೆ ದೊರಕುವಂತಹ ಮಹತ್ವ ಕ್ರೀಡೆಗೂ ದೊರಕಬೇಕು. ಕ್ರೀಡೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುವುದರೊಂದಿಗೆ ದೇಶದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ಗೋವಿಂದರಾಜು ಹೇಳಿದರು. ಬಿಜಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಇಬ್ಬರು ಪ್ರಾಧ್ಯಾಪಕರಾದ ಸವಿತಾ ಸುವರ್ಣ ಹಾಗೂ ಡಾ.ಶಾಂತಕುಮಾರ್ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಬಿಜಿಎಸ್ ದಂತ ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡವನ್ನು ಕೂಡ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀ ಪ್ರಕಾಶನಾಥ ಸ್ವಾಮೀಜಿ, ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮ ಕೂಡ ಗಮನ ಸೆಳೆಯಿತು.

RELATED ARTICLES

Latest News