ವರ್ಗಾವಣೆ ರದ್ದುಮಾಡಲು ಒಪ್ಪದ ಸಿಎಂ, ರೋಹಿಣಿ ಸಿಂಧೂರಿ ಪ್ರಯತ್ನ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ತಮ್ಮನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರೆಸುವಂತೆ ನೂತನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಶನಿವಾರ ರಾತ್ರಿ ವರ್ಗಾವಣೆಗೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವನ್ನು ಭೇಟಿ‌ ಮಾಡಿ ಚರ್ಚೆ ನಡೆಸಿದರು.

ತಮ್ಮನ್ನು ಅದೇ ಸ್ಥಾನದಲ್ಲಿ ಮುಂದುವರೆಸುವಂತೆ ಸಿ.ಎಂ ಬಳಿ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಯಡಿಯೂರಪ್ಪ ಮಾತ್ರ ಸೊಪ್ಪು ಹಾಕದೆ, ವರ್ಗಾವಣೆ ಮಾಡಿರುವ ಆದೇಶವನ್ನು ಹಿಂಪಡೆಯಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ಇದರಿಂದಾಗಿ ತೀವ್ರ ಮುಜುಗರಕ್ಕೆ ಸಿಲುಕಿದ ರೋಹಿಣಿ ಸಿಂಧೂರಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಬರಿಗೈಲಿ ಹಿಂತಿರುಗಿದರು. ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು,ರೋಹಿಣಿ ಸಿಂಧೂರಿ ಬೆಳಗ್ಗೆ ಬಂದಿದ್ದರು.ಅವರನ್ನು ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ರದ್ದು ಮಾಡಲು ಮನವಿ ಮಾಡಿದರು.ಆದರೆ ವರ್ಗಾವಣೆ ರದ್ದು ಮಾಡುವುದಿಲ್ಲ ಎಂದು ‌ನಾನು ಸ್ಪಷ್ಟಪಡಿಸಿರುವೆ ಎಂದು ಹೇಳಿದರು.

ಇದಕ್ಕೂ ಮುನ್ನ ಬೆಳಗ್ಗೆ ಮುಖ್ಯಮಂತ್ರಿ ನಿವಾಸ ‘ಕಾವೇರಿ’ಗೆ ಬಂದ ಸಿಂಧೂರಿ, ತಮ್ಮ ವರ್ಗಾವಣೆಯನ್ನು ರದ್ದುಪಡಿಸುವಂತೆ‌ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಸುಮಾರು ಅರ್ಧ ಗಂಟೆ ಸಿಂಧೂರಿ ಅವರು ಮುಖ್ಯಮಂತ್ರಿಯ ನಿವಾಸದಲ್ಲಿದ್ದರು.

‘ಪಾಲಿಕೆ ಅಯುಕ್ತೆ ಶಿಲ್ಪನಾಗ್ ಜೊತೆಗಿನ ವಿವಾದದಲ್ಲಿ ತಮ್ಮದೇನೂ ತಪ್ಪಿಲ್ಲ’ ಎಂದು ಮುಖ್ಯಮಂತ್ರಿಗೆ‌ ಮನವರಿಕೆ ಮಾಡಲು ಬಂದಿದ್ದರು. ಆದರೆ, ವರ್ಗಾವಣೆ ರದ್ದುಪಡಿಸಲು ಮುಖ್ಯಮಂತ್ರಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದೂ ಗೊತ್ತಾಗಿದೆ.

ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಅವರನ್ನು ರಾಜ್ಯ ಸರ್ಕಾರ ಶನಿವಾರ ರಾತ್ರಿ ಎತ್ತಂಗಡಿ ಮಾಡಿದೆ. ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಶಿಲ್ಪಾ ನಾಗ್ ಆವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ.

ವಾಣಿ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್‌ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಮೈಸೂರು ಪಾಲಿಕೆ ಆಯುಕ್ತರಾಗಿ ನೇಮಿಸಲಾಗಿದೆ.

Facebook Comments

Sri Raghav

Admin