ನೆಲಮಂಗಲ-ಸೋಲಾಪುರ ನಡುವೆ ಸಂಚರಿಸುವ ರೋ-ರೋ ರೈಲು ಸೇವೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ರೋ-ರೋ( Roll on-Roll off) ರೈಲು ಸೇವೆಯ ಚೊಚ್ಚಲ ಪ್ರಯಾಣಕ್ಕೆ ಹಸಿರು ನಿಶಾನೆ ತೋರುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಚಾಲನೆ ನೀಡಿದರು.

ತಮ್ಮ ಅಧಿಕೃತ ಕಚೇರಿ ಕೃಷ್ಣದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ,,ಸಚಿವರಾದ ಆರ್.ಅಶೋಕ್ , ರಮೇಶ್ ಜಾರಕಿಹೊಳಿ ಸೇರಿದಂತೆ ಮತ್ತಿತರರು ವಿಡಿಯೋ ಲಿಂಕ್ ಮೂಲಕ ರೈಲಿಗೆ ಚಾಲನೆ ಕೊಟ್ಟರು.

ಬಳಿಕ ಮಾತನಾಡಿದ ಸಿ‌ಎಂ.ಯಡಿಯೂರಪ್ಪ  ಅವರು,ಈ ರೈಲಿನಿಂದಾಗಿ ನೆಲಮಂಗಲದ ಹತ್ತಿರ ಇರುವ ಎ.ಪಿ.ಎಂ.ಸಿ ಮಾರುಕಟ್ಟೆ, ಪೀಣ್ಯ ಹಾಗೂ ನೆಲಮಂಗಲ ಭಾಗದಲ್ಲಿರುವ ಅನೇಕ ಕೈಗಾರಿಕೆಗಳು ಹಾಗೂ ಸಾರಿಗೆ ಸಂಸ್ಥೆಗಳು ಇದರಿಂದ ಅನುಕೂಲ ಹೊಂದಲಿವೆ ಎಂದು ಅಭಿಪ್ರಾಯಪಟ್ಟರು.

ಸರಕು ಸಾಮಾನು ಸಹಿತವಾದ ಅಥವಾ ಖಾಲಿ ಇರುವ 42 ಟ್ರಕ್‍ಗಳನ್ನು ಈ ರೊ-ರೊ ರೈಲಿನ ಮೇಲೆ ಲೋಡ್ ಮಾಡಿ ಸಾಗಿಸಬಹುದಾಗಿದೆ. ನೆಲಮಂಗಲ ಹಾಗೂ ಬಾಲೆಯಲ್ಲಿ ಈ ಟ್ರಕ್‍ಗಳನ್ನು ರೈಲಿಗೆ ಹತ್ತಿಸುವ ಹಾಗೂ ರೈಲಿಗೆ ಇಳಿಸುವಂತಹ ಕಾರ್ಯ ನಡೆಯುತ್ತದೆ ಎಂದು ಹೇಳಿದರು.

ರಸ್ತೆ ಮೂಲಕ ಸಂಚರಿಸುವ ಟ್ರಕ್‍ಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಕ್ಷಿಪ್ರವಾಗಿ ಟ್ರಕ್‍ಗಳನ್ನು ಹಾಗೂ ಸರಕು ಸಾಮಗ್ರಿಗಳನ್ನು ಈ 2 ನಗರಗಳ ನಡುವೆ ಸಾಗಾಣಿಕೆ ಮಾಡಬಹುದಾಗಿದೆ.

ಗೋದಾಮುಗಳಿಂದ ಅಥವಾ ಮಾರುಕಟ್ಟೆಯಿಂದ ಲೋಡ್ ಆದಂತಹ ಟ್ರಕ್‍ಗಳು ರೈಲ್ವೆ ನಿಲ್ದಾಣದಲ್ಲಿ ಬಂದು ರೈಲಿನಲ್ಲಿ ಲೋಡ್ ಆಗುತ್ತವೆ.ರೈಲುಗಳ ಮೂಲಕ ಈ ಟ್ರಕ್‍ಗಳು ಮತ್ತೊಂದು ನಗರಕ್ಕೆ ಬಂದು ಸಾಮಾನು ಸರಂಜಾಮುಗಳೊಂದಿಗೆ ಗೋದಾಮು ಅಥವಾ ಮಾರುಕಟ್ಟೆಗೆ ಹೋಗಿ ಹೊತ್ತು ತಂದ ಸಾಮಾನುಗಳನ್ನು ಅನ್‍ಲೋಡ್ ಮಾಡಲು ಈ ವ್ಯವಸ್ಥೆಯಿಂದ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಇಂತಹ ಒಂದು ರೊ-ರೊ ರೈಲಿನಲ್ಲಿ ಸರಕು ಹಾಗೂ ಟ್ರಕ್‍ಗಳೆರಡರ ಭಾರವು ಸೇರಿ 1,260 ಟನ್ ಭಾರವನ್ನು ಸಾಗಿಸಬಹುದಾಗಿದೆ. ಈ ವ್ಯವಸ್ಥೆ ಪರಿಸರ ಸ್ನೇಹಿಯಾಗಿದ್ದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಟ್ರಕ್‍ಗಳ ಧೀರ್ಘ ಬಾಳಿಕೆಗೆ ಸಹಕಾರಿಯಾಗುತ್ತದೆ.

ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ ಅಡಿಕೆ ತೋಟಗಾರಿಕೆ ಉತ್ಪನ್ನಗಳು ಕೈಗಾರಿಕಾ ಉತ್ಪನ್ನಗಳನ್ನು ಸೋಲಾಪುರಕ್ಕೆ ಸಾಗಿಸಲು ಹಾಗೂ ಸೋಲಾಪುರದಿಂದ ಈರುಳ್ಳಿ, ಬೇಳೆ ಕಾಳುಗಳು ಮುಂತಾದ ಸರಕುಗಳನ್ನು ಬೆಂಗಳೂರಿಗೆ ಸಾಗಿಸಲು ಇದರಿಂದ ನೆರವಾಗಲಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಸಾರಿಗೆ ಪ್ರಕಾರಗಳನ್ನು ಒಗ್ಗೂಡಿಸುವ Multi model Transport system ನ್ನು ನಿರಂತರವಾಗಿ ಪ್ರತಿಪಾದಿಸಿದ್ದಾರೆ. ಅವರ ಆಶಯದ ಫಲವಾಗಿ ಈ ರೊ-ರೊ ಸೇವೆ ಆರಂಭಗೊಳ್ಳುತ್ತಿದೆ.

ಈ ಮೊದಲು ಕೊಂಕಣ್ ರೈಲ್ವೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೊ-ರೊ ಸೇವೆಯನ್ನು ಬೆಂಗಳೂರು ಮತ್ತು ಸೋಲಾಪುರದ ಮಧ್ಯೆ ಆರಂಭಿಸುತ್ತಿರುವುದಕ್ಕೆ ನಾನು ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುವುದಾಗಿ ಯಡಿಯೂರಪ್ಪ ಅವರು ಹೇಳಿದರು.

Facebook Comments

Sri Raghav

Admin