ಮನೆ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಆ.26- ಭೀಕರ ಮಳೆ, ಪ್ರವಾಹ ನಿಂತರೂ ಅದು ಸೃಷ್ಟಿಸುತ್ತಿರುವ ಅನಾಹುತಗಳು ಮಾತ್ರ ನಿಂತಿಲ್ಲ. ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಸತತ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಮೃತ ದುರ್ದೈವಿಗಳನ್ನು ಮೂರು ವರ್ಷದ ಮಗು ಇಮ್ರಾನ್, ಇಮಾಮ್ ಬೀ (45) ಮತ್ತು ಹಸೀನಾ (25) ಎಂದು ಗುರುತಿಸಲಾಗಿದೆ. ಖಾದರ್ ಬಾಷಾ ಎಂಬವರಿಗೆ ಸೇರಿದ ಮನೆಯಲ್ಲಿ ಒಟ್ಟು ಐದು ಜನ ವಾಸವಿದ್ದು, ಘಟನೆ ನಡೆದ ಸಮಯದಲ್ಲಿ ಮೂವರು ಮಾತ್ರ ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ.

ಆಗಾಗ ಸುರಿಯುತ್ತಿದ್ದ ಮಳೆಯಿಂದ ಈ ಮನೆ ಶಿಥಿಲಗೊಂಡಿತ್ತು. ನಿನ್ನೆ ತಡರಾತ್ರಿ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದ ಪರಿಣಾಮ ಈ ಅವಘಢ ಸಂಭವಿಸಿದೆ. ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಸಿಕೆ.ಬಾಬಾ ಮತ್ತು ಜಿ.ಪಂ ಸಿಇಓ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಸಂಬಂಧಿಕರು, ಗ್ರಾಮಸ್ಥರು ಈ ಘಟನೆಯಿಂದ ಆತಂಕಗೊಂಡಿದ್ದು, ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಮನೆಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ದುರಸ್ಥಿ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

Facebook Comments