ಮನೆ ಮಾಳಿಗೆ ಕುಸಿದು ತಾಯಿ ಮತ್ತು ಮೂವರು ಮಕ್ಕಳ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

4-Killed

ಚಿತ್ರದುರ್ಗ, ಫೆ.9-ಮನೆಯ ಮಾಳಿಗೆ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ನಿವಾಸಿ ತಾಯಿ ನಾಗರತ್ನಮ್ಮ (30), ಮಕ್ಕಳಾದ ಕೋಮಲ (02), ತೀರ್ಥವರ್ಧನ(04) ಮತ್ತು ಯಶಸ್ವಿನಿ(05) ಮೃತಪಟ್ಟ ದುರ್ದೈವಿಗಳು.

ಘಟನೆಯಲ್ಲಿ ಚಂದ್ರಶೇಖರ್ ಹಾಗೂ ದೇವಿಕಾ ಎಂಬವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪೂರ್ವಜರು ಕಟ್ಟಿದ ಮನೆಯಾದ್ದರಿಂದ ಮಾಳಿಗೆ ಸಾಕಷ್ಟು ಶಿಥಿಲಾವಸ್ಥೆಯಲ್ಲಿತ್ತು. ಎಲ್ಲರೂ ನಿದ್ರಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಮುಂಜಾನೆ ಏಕಾಏಕಿ ಮಾಳಿಗೆ ಕುಸಿದುಬಿದ್ದಿದೆ.

ಪರಿಣಾಮ ನಾಗರತ್ನಮ್ಮ, ಕೋಮಲ, ತೀರ್ಥವರ್ಧನ ಮತ್ತು ಯಶಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟರೆ, ಚಂದ್ರಶೇಖರ್ ಮತ್ತು ದೇವಿಕಾ ತೀವ್ರ ಪೆಟ್ಟುಗಳಾಗಿ ನರಳುತ್ತಿದ್ದರು.  ಕೂಡಲೇ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಮಜೋಗಿಹಳ್ಳಿಯಲ್ಲಿ ಬಹುತೇಕ ಜನರು ಮಾಳಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅದೇ ರೀತಿ ಚಂದ್ರಶೇಖರ್ ಕುಟುಂಬದವರು ಕೂಡ ಮಾಳಿಗೆ ಮನೆಯಲ್ಲಿ ವಾಸವಾಗಿದ್ದರು.

ಇಂದು ಬೆಳಗಿನ ಜಾವ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಮಾಳಿಗೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# ಮುಗಿಲು ಮುಟ್ಟಿದ ಆಕ್ರಂಧನ:
ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ನಿದ್ರಾವಸ್ಥೆಯಲ್ಲಿದ್ದಾಗಲೇ ಮಕ್ಕಳು ಕೂಡ ಸಾವನ್ನಪ್ಪಿರುವುದು ಎಲ್ಲರಲ್ಲೂ ದಿಗ್ಭ್ರಾಂತಿ ಮೂಡಿಸಿದೆ. ಆಸ್ಪತ್ರೆ ಬಳಿ ಜನಜಂಗುಳಿ ಜಮಾಯಿಸಿದ್ದಾರೆ.

Facebook Comments

Sri Raghav

Admin