ಉದ್ಯಮದಲ್ಲಿ ಯಶಸ್ಸು ಸಾಧಿಸೋದು ಹೇಗೆ..? ಇಲ್ಲಿದೆ ರೂಪಾರಾಣಿ ಸಕ್ಸಸ್ ಸ್ಟೋರಿ

ಈ ಸುದ್ದಿಯನ್ನು ಶೇರ್ ಮಾಡಿ

ಸಾಧನೆ ಮಾಡಲೇಬೇಕೆಂಬ ಛಲ ಹಾಗೂ ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲಾಗಲಿ ಮುಂದೆ ಬರಬಹುದು. ಇದು ಅಕ್ಷರಶಃ ಸತ್ಯ. ಇದಕ್ಕೆ ಮಹಿಳಾ ಉದ್ಯಮಿ ರೂಪಾರಾಣಿ ಸಾಕ್ಷಿಯಾಗಿದ್ದಾರೆ.  ಇವರು ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲಾ ಬೆಂಗಳೂರಿನಲ್ಲಿ. ಅಪ್ಪಟ ಕನ್ನಡತಿ. ಚಿಕ್ಕವಯಸ್ಸಿನಲ್ಲೇ ಯಾವ ರಂಗದಲ್ಲಾದರೂ ಸರಿ ಸಾಧನೆ ಮಾಡಲೇಬೇಕೆಂಬ ಕನಸು ಕಂಡವರು.

ಬೆಂಗಳೂರಿನ ಎಸ್‍ಜೆಆರ್‍ಸಿ ಕಾಲೇಜಿನಲ್ಲಿ ಡಿಪ್ಲೋಮಾ ಇನ್‍ಫಾರ್ಮಸಿ ಮತ್ತು ವಿಎಚ್‍ಡಿ ಕಾಲೇಜಿನಲ್ಲಿ ಹೋಮ್‍ಸೈನ್ಸ್ ಪದವಿ ಮಾಡಿದ್ದಾರೆ. ಚಿಕ್ಕಂದಿನಿಂದ ಏನಾದರೂ ಮಾಡಬೇಕು, ಸಾಧಿಸಬೇಕು. ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು ಎಂಬೆಲ್ಲ ಕನಸು ಕಂಡು ಅದನ್ನು ನನಸಾಗಿಸಿಕೊಂಡಿದ್ದಾರೆ.

#ಅಶಕ್ತರಿಗೆ ನೆರವು:  ಇವರ ಮನಸ್ಸು ಬಡ ಅಶಕ್ತ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಬೇಕು. ಅವರಿಗೆ ಉದ್ಯೋಗ ಕೊಡಬೇಕು ಎಂದು ಸದಾ ತುಡಿಯುತ್ತಿದುದರಿಂದ ಸಣ್ಣ ಉದ್ದಿಮೆ ಪ್ರಾರಂಭಿಸಿ ಮಹಿಳೆಯರಿಗೆ ಉದ್ಯೋಗ ಕೊಡಬೇಕೆಂಬ ಆಸೆ ಚಿಗುರಿತು. ಆಗ ಹೊಳೆದದ್ದೇ ಇಡ್ಲಿ, ದೋಸೆ.

ಇತ್ತೀಚಿನ ಜಂಜಡದ ಬದುಕಿನಲ್ಲಿ ಎಲ್ಲರಿಗೂ ಧಾವಂತ. ಅದರಲ್ಲೂ ಒಂಟಿ ಮಹಿಳೆಯರು, ಅವಿವಾಹಿತರು ಅಷ್ಟೇ ಏಕೆ ಗೃಹಿಣಿಯರು ಕೂಡ ಬೆಳಗಾದರೆ ತಿಂಡಿಗೆ ಏನು ಮಾಡೋದು ಎಂಬ ಚಿಂತೆಯಲ್ಲಿರುತ್ತಾರೆ. ಇದನ್ನೇ ಮನದಲ್ಲಿಟ್ಟುಕೊಂಡು ರುಚಿ- ಶುಚಿಯಾದ ದೋಸೆ, ಇಡ್ಲಿ ಹಿಟ್ಟನ್ನು ಸಿದ್ದಪಡಿಸಿ ಮಾರಾಟ ಮಾಡುವುದು ಎಂದು ನಿರ್ಧರಿಸಿದರು. ಇದು ಮೈ ಹ್ಯಾಪಿ ಡ್ರೀಮ್ಸ್ ಸಂಸ್ಥೆ ಸ್ಥಾಪನೆಗೆ ಕಾರಣವಾಯಿತು. ಇದಕ್ಕೆ ಎಫ್‍ಕೆಸಿಸಿಐನ ನನ್ನ ಕೆಲವು ಸ್ನೇಹಿತರ ಫೋತ್ಸಾಹವೂ ಕಾರಣ ಎಂದು ಅಭಿಮಾನದಿಂದ ಹೇಳುತ್ತಾರೆ ರೂಪಾ.

#ಮೈ ಹ್ಯಾಪಿ ಡ್ರೀಮ್ಸ್: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರೂಪಾ ಮೈ ಹ್ಯಾಪಿ ಡ್ರೀಮ್ಸ್ ಎಂಬ ಹೆಸರಿನಲ್ಲಿ ಇಡ್ಲಿ, ದೋಸೆ ಹಿಟ್ಟು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಒಂದು ಟನ್ ಹಿಟ್ಟನ್ನು ಸಿದ್ಧಪಡಿಸುತ್ತಾರೆ. ಇವರ ಫ್ಯಾಕ್ಟರಿ ಸುಮಾರು 5000 ಚದರಡಿಯಷ್ಟಿದೆ. 3000 ಮಂದಿ ಗ್ರಾಹಕರನ್ನು ಹೊಂದಿದ್ದಾರೆ. ಅಕ್ಕಿ, ಉದ್ದು, ಅವಲಕ್ಕಿ, ಮೆಂತ್ಯ ಬಳಸಿ ಸೋಡಾ ಹಾಗೂ ಪ್ರಿಸರ್ವೆಟಿವ್‍ಬಳಸದೆ ರುಚಿ-ಶುಚಿಗೆ ಅತಿಹೆಚ್ಚು ಆದ್ಯತೆ ನೀಡಿ ಇಡ್ಲಿ , ದೋಸೆ ಹಿಟ್ಟು ಉತ್ಪನ್ನ ಮಾಡುತ್ತಿ ದ್ದಾರೆ. 1 ಕೆಜಿ ಹಿಟ್ಟಿಗೆ 65 ರೂ. ಬೆಲೆ ಇದ್ದರೆ ರಾಗಿ ಇಡ್ಲಿ, ದೋಸೆ ಹಿಟ್ಟು ಕೆಜಿಗೆ 75ರೂ ಇದೆ. ಈ ಹಿಟ್ಟನ್ನು ಲಾಕ್ ಆಗುವಂತಹ ಹಾನಿಯಾಗದಂತ ಪೌಚ್‍ನಲ್ಲಿ ಹಾಕಿ ಕಳುಹಿಸುವುದರಿಂದ ಇದು ಚೆಲ್ಲುವುದಿಲ್ಲ.

ಈ ಹಿಟ್ಟಿನಿಂದ ಆಪಮ್, ಮಸಾಲದೋಸೆ, ಪಡ್ಡು, ಬಟನ್ ಇಡ್ಲಿ ಮಾಡಬಹುದು ಹಾಗಾಗಿ ತಿಂಡಿ ತಯಾರಿಕೆ ಸುಲಭವಾಗಲಿದೆ. ಎಲ್ಲ ಸೂಪರ್ ಮಾರ್ಕೆಟ್‍ಗಳು, ಅಂಗಡಿಗಳು, ನಂದಿನಿ ಪಾರ್ಲರ್‍ಗಳು, ಮಾಲ್‍ಗಳಿಗೂ ಹಿಟ್ಟನ್ನು ಕಳುಹಿಸುತ್ತಿದ್ದಾರೆ. ಇವರು 15 ಮಂದಿಗೆ ಕೆಲಸ ಕೊಟ್ಟಿದ್ದಾರೆ. ಉದ್ದಿಮೆಯಲ್ಲಿ ಶುಚಿತ್ವಕ್ಕೆ ಅತಿಹೆಚ್ಚು ಆದ್ಯತೆ ನೀಡಿರುವುದು ವಿಶೇಷ.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿರುವುದರಿಂದ ಪೌಷ್ಠಿಕಾಂಶಯುಕ್ತ ಗುಣಮಟ್ಟದ ನಮ್ಮ ಪದಾರ್ಥಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರೂಪಾ.ಮನೆ ಆರ್‍ಟಿನಗರದಲ್ಲಿದ್ದು ಸದ್ಯ ಅಲ್ಲಿ ಒಂದಿಬ್ಬರು ಕೆಲಸದವರನ್ನಿಟ್ಟುಕೊಂಡು ಚಪಾತಿ, ಪೂರಿ, ಪರೋಟ (ಆಫ್ ಬಾಯ್ಲ್ಡ್) ಸಿದ್ದಪಡಿಸಿ ಮಾರಾಟ ಮಾಡುತ್ತಾರೆ.

#ಮುಂದಿನ ಯೋಜನೆ: ಬೆಂಗಳೂರಿನಲ್ಲಷ್ಟೇ ಅಲ್ಲ. ಕನಕಪುರ, ತುಮಕೂರು, ಬಿಜಾಪುರ, ಚಿತ್ರದುರ್ಗಕ್ಕೂ ಹಿಟ್ಟನ್ನು ಕಳುಹಿಸುತ್ತಿದ್ದಾರೆ. ಇಡೀ ರಾಜ್ಯ ಹಾಗೂ ದೇಶ, ವಿದೇಶಗಳಿಗೂ ತಮ್ಮ ಸಂಸ್ಥೆಯ ಉತ್ಪನ್ನವನ್ನು ರಫ್ತು ಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಂಜೆ ಸಮಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳ ಬಳಿ ಮೊಬೈಲ್ ವ್ಯಾನ್‍ಗಳ ಮೂಲಕ ನಮ್ಮ ಸಂಸ್ಥೆಯ ಉತ್ಪನ್ನಗಳನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದ್ದೇವೆ. ಕೆಲಸ ಮುಗಿಸಿ ಮನೆಗೆ ಹೋಗುವವರು ಈ ಉತ್ಪನ್ನಗಳನ್ನು ಕೊಳ್ಳುವುದರಿಂದ ಅವರಿಗೆ ನಾಳೆಯ ಉಪಹಾರದ ಚಿಂತೆ ಇರುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ ರೂಪಾರಾಣಿ.

ಚಟ್ನಿಪುಡಿ ಸೇರಿದಂತೆ ಸಾಂಬಾರ್ ಪೌಡರ್ ಮತ್ತಿತರ ಮಸಾಲ ಪದಾರ್ಥಗಳು ಹಾಗೂ ಇನ್‍ಸ್ಟಂಟ್ ಕಾಫಿ ಮತ್ತಿತರ ಉತ್ಪನ್ನಗಳನ್ನು ಸಿದ್ಧಪಡಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ರೂಪಾ ಅವರು ಎಫ್‍ಕೆಸಿಸಿಐ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಗೆದ್ದು ಎಫ್‍ಕೆಸಿಸಿಐ ನಿರ್ದೇಶಕಿ ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಫೆಡರೇಷನ್ ಆಫ್ ಇಂಡಿಯನ್ ವುಮೆನ್ ಎಂಟರ್‍ಪ್ರೆನ್ಯೂರ್‍ನ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಇವರು ಬಿಜೆಪಿ ಮಹಿಳಾ ಘಟಕದ ಸಕ್ರಿಯ ಸದಸ್ಯೆಯಾಗಿದ್ದಾರೆ.

ಎಫ್‍ಕೆಸಿಸಿಐನಿಂದ ಆಸಕ್ತಿಯುಳ್ಳ ಮಹಿಳೆಯರಿಗೆ ಲೋನ್ ಕೊಡಿಸಲು ನೆರವಾಗುವ ಮೂಲಕ ಅವರು ಸ್ವಂತ ದುಡಿಮೆ ಪ್ರಾರಂಭಿಸಿ ಸ್ವಾವಲಂಬಿಗಳನ್ನಾಗಿಯೂ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಮುಂದೆ ಪ್ರತಿಯೊಂದು ಬಡಾವಣೆಯಲ್ಲೂ ಆಸಕ್ತಿ ಇರುವ ಮಹಿಳೆಯರನ್ನು ಗುರುತಿಸಿ ಇಡ್ಲಿ-ದೋಸೆ ಹಿಟ್ಟು ಕಳುಹಿಸಿಕೊಡುವುದು, ಅವರು ತಮ್ಮ ಪ್ರದೇಶದಲ್ಲಿ ಅದನ್ನು ಮಾರಾಟ ಮಾಡುವುದರಿಂದ ಸ್ವಾವಲಂಬಿಯನ್ನಾಗಿಸುವುದು ಇವರ ಧ್ಯೇಯೋದ್ದೇಶಗಳಲ್ಲಿ ಒಂದು.

#ಮೊಬೈಲ್ ಆ್ಯಪ್ ಮೂಲಕ ಡೋರ್ ಡೆಲಿವರಿ: ಕಾವೇರಿ ಫಾರ್ಮ್ ಎಂಬ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಎಂಎಚ್‍ಡಿ ಉತ್ಪನ್ನಗಳನ್ನು ಮನೆಗೆ ತರಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಒಂದು ಸಾವಿರ ಅಪಾರ್ಟ್‍ಮೆಂಟ್‍ಗಳಿಗೆ ಎಂಎಚ್‍ಡಿ ಮೂಲಕ ಹಿಟ್ಟನ್ನು ಡೋರ್ ಡೆಲಿವರಿ ಮಾಡುತ್ತಿದ್ದಾರೆ ರೂಪಾ. ಕನಿಷ್ಠ 3 ಕೆಜಿ ಹಿಟ್ಟನ್ನು ಕಳುಹಿಸಲಾಗುತ್ತಿದೆ.  ಹೆಚ್ಚಿನ ಮಾಹಿತಿಗೆ ರೂಪಾರಾಣಿ ಮೊಬೈಲ್: 9740710359 ಸಂಪರ್ಕಿಸಬಹುದು.

– ಅಮೃತವರ್ಷಿಣಿ

Facebook Comments