BIG NEWS: ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ
ಬೆಂಗಳೂರು,ನ.23-ಐಎಂಎ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಆರ.ರೋಷನ್ ಬೇಗ್ ಅವರ ನಿವಾಸದ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ. ನಿನ್ನೆಯಷ್ಟೇ ಸಿಬಿಐ ಅವರನ್ನು ಬಂಧಿಸಿದ ಬೆನ್ನಲ್ಲೇ ದೆಹಲಿಯ 7 ಮಂದಿ ಸಿಬಿಐ ಅಕಾರಿಗಳ ತಂಡ ಬೆಳಂಬೆಳಗ್ಗೆಯೇ ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ದಾಳಿಯ ಸಂದರ್ಭದಲ್ಲಿ ಬೇಗ್ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಸಿಬಿಐ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಎಂಎ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಆಲಿಖಾನ್ ಜೊತೆ ನಡೆಸಿದ ಹಣದ ವಾಹಿವಾಟು, ಬೆಲೆಬಾಳುವ ಉಡುಗೊರೆಗಳು, ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಬ್ಯಾಂಕ್ ವಹಿವಾಟು, ಬ್ಯಾಂಕ್ ಖಾತೆಗಳು, ಚರ-…ಸ್ಥಿರಾಸ್ತಿ, ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿ-ಪಾಸ್ತಿ, ನಿವೇಶನ, ಸಂಬಂಧಿಕರ ಹೆಸರಿನಲ್ಲಿರುವ ಖರೀದಿಸಿದ್ದಾರೆ ಎನ್ನಲಾದ ಆಸ್ತಿ, ಫ್ಲಾಟ್ , ಬೆಲೆಬಾಳುವ ವಾಹನಗಳು ಸೇರಿದಂತೆ ಇಂಚಿಂಚೂ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದಾರೆ.
ಈಗಾಗಲೇ ಬಂಧನದಲ್ಲಿರುವ ಮನ್ಸೂರ್ ಆಲಿಖಾನ್ , ತನ್ನಿಂದ ರೋಷನ್ ಬೇಗ್ 400 ಕೋಟಿ ಹಣ ಪಡೆದಿದ್ದಲ್ಲದೆ, ವಿದೇಶದಿಂದ ಬೆಲೆಬಾಳುವ ಉಡುಗೊರೆಯನ್ನೂ ಕೂಡ ಪಡೆದಿದ್ದಾರೆ ಎಂಬುದನ್ನು ಸಿಬಿಐ ಮುಂದೆ ಬಾಯಿ ಬಿಟ್ಟಿದ್ದ. ರೋಷನ್ ಬೇಗ್ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರ ಬಗ್ಗೆ ಸಿಬಿಐ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿತ್ತು. ನಿನ್ನೆ ದಿನಪೂರ್ತಿ ವಿಚಾರಣೆ ನಡೆಸಿದ ಬಳಿಕ ಬೇಗ್ ಅವರನ್ನು ಬಂಸಲಾಗಿತ್ತು. ವಿಶೇಷ ನ್ಯಾಯಾಲಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬೇಗ್ ಇದ್ದಾರೆ.
ಐಎಂಎ ಹಗರಣಕ್ಕೆ ಸಂಬಂಸಿದಂತೆ ಎಸ್ಐಟಿ 30 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದರಲ್ಲಿ ಕೆಲವು ಸಂಸ್ಥೆಗಳೂ ಸೇರಿವೆ. ಮನ್ಸೂರ್ ಖಾನ್ನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು. ಮನ್ಸೂರ್ಖಾನ್ ಆಪ್ತ ನಿಜಾಮುದ್ದೀನ್, ನವೀದ್ಅಹ್ಮದ್, ಐಎಂಎ ನಿರ್ದೇಶಕ ವಾಸಿಂ, ಅರ್ಷಾದ್ ಖಾನ್, ಅಫ್ಸರ್ ಪಾಷಾ, ಅಸಾದುಲ್ಲಾ, ಶಾದಬ್ ಅಹ್ಮದ್ ಖಾನ್, ಇಸ್ರಾರ್ ಅಹ್ಮದ್ ಖಾನ್, ಪುಸೇಲ್ ಅಹ್ಮದ್, ಮೊಹಮ್ಮದ್ ಇದ್ರೀಶ್, ಉಸ್ಮಾನ್ ಅಬ್ರೇಸ್, ಸೈಯದ್ ಮುಜಾಹಿದ್, ಬೆಂಗಳೂರು ಜಿಲ್ಲಾಕಾರಿ ಆಗಿದ್ದ ವಿಜಯಶಂಕರ್, ಎಸಿ ಆಗಿದ್ದ ಎಲ್.ಸಿ.ನಾಗರಾಜು, ಬಿಡಿಎ ಅಕಾರಿ ಪಿ.ಡಿ.ಕುಮಾರ್, ಗ್ರಾಮಲೆಕ್ಕಿಗ ಮಂಜುನಾಥ ಇನ್ನೂ ಹಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಶಿವಾಜಿನರ ಐಎಂಎ ಹೆಲ್ತ್ಕೇರ್, ಶಿವಾಜಿನಗರ ಐಎಂಎ ಜ್ಯುವೆಲ್ಸ್, ಶಿವಾಜಿನಗರ ಐಎಂಎ ಬಿಲಿಯನ್ ಟ್ರೇಡಿಂಗ್, ಶಿವಾಜಿನಗರ ಐಎಂಎ ಕೋಆಪರೇಟಿವ್ ಈ ಸಂಸ್ಥೆಗಳ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಐಎಂಎ ಹಗರಣದ ತನಿಖೆಯನ್ನು ರವಿಕಾಂತೇಗೌಡ ನೇತೃತ್ವದ ಎಸ್ಐಟಿ ನಡೆಸುತ್ತಿತ್ತು, ಎಸ್ಐಟಿಯು ಆಸ್ತಿ ವಶದ ಜೊತೆಗೆ ಹಲವು ಮಹತ್ವದ ಸಾಕ್ಷ್ಯಗಳನ್ನು ಮನ್ಸೂರ್ ಖಾನ್ನಿಂದ ಕಲೆ ಹಾಕಿತ್ತು. ಇದರಲ್ಲಿ ಮುನ್ನೂರು ಕೆಜಿ ನಕಲಿ ಚಿನ್ನದ ಬಿಸ್ಕತ್ತುಗಳು ಸೇರಿವೆ.
ಈ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಅವರನ್ನು ಎಸ್ಐಟಿಯು ವಿಚಾರಣೆಗೆ ಒಳಪಡಿಸಿತ್ತು. ರೋಷನ್ ಬೇಗ್ ಅವರು ಐಎಂಎ ಸಂಸ್ಥೆಯಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಮನ್ಸೂರ್ ಖಾನ್ ಬಂಧನಕ್ಕೂ ಮುನ್ನ ಹೊರಹಾಕಿದ್ದ ಸರಣಿ ವಿಡಿಯೋದಲ್ಲಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಂಗ್ರೆಸ್ನಿಂದ ಅಮಾನತುಗೊಂಡ ಬಳಿಕ ರೋಷನ್ ಬೇಗ್ ಬಿಜೆಪಿಯತ್ತ ವಾಲಿದ್ದರು. ಮಾಜಿ ಸಚಿವ ಎಂ.ಜೆ.ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಬಿಜೆಪಿ ಸೇರುವುದಕ್ಕೆ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಜೊತೆಗೆ ಆರ್ಎಸ್ಎಸ್ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಯತ್ನ ಕೈಗೂಡಲಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಐಎಂಎ ಹಗರಣ ಬೆಳಕಿಗೆ ಬಂದಿತ್ತು. ಆಗ ಸರ್ಕಾರ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಿತ್ತು.ಮೊದಲಿಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ನಂತರ ಬಿಟಿಎಂ ಲೇಔಟ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ವಂಚನೆ ಪ್ರಕರಣದ ದೂರು ದಾಖಲಾಗಿತ್ತು. ಐಎಂಎ ವಿವಿಧ ಸ್ಕೀಮ್ ಮೂಲಕ ನಾಲ್ಕು ಸಾವಿರ ಕೋಟಿ ಸಾರ್ವಜನಿಕರಿಗೆ ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿದೆ.