ಐಎಂಎ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ರೋಷನ್‌ ಬೇಗ್ ಅರೆಸ್ಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಅರ್.ರೋಷನ್‌ ಬೇಗ್ ಅವರನ್ನು ಸಿಬಿಐ ಇಂದು ಬಂಧಿಸಿದೆ. ಹಗರಣದಲ್ಲಿ ರೋಷನ್ ಬೇಗ್ ಶಾಮೀಲಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿರುವ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.

ಇಂದು ಬೆಳಗ್ಗೆಯಿಂದಲೂ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸಿದ ಸಿಬಿಐ, ಸಂಜೆ ವೇಳೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯ ಬೇಗ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ರೋಷನ್ ಬೇಗ್ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ರೋಷನ್‌ ಬೇಗ್‌ ಅವರಿಗೆ ಮನ್ಸೂರ್‌ ಖಾನ್‌ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್‌ ಖಾನ್‌ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಂಜೆಯ ವೇಳೆ ಬಂಧಿಸಿದೆ.

ಐಎಂಎ ಹಗರಣದ ಕುರಿತು ಫೋರೆನ್ಸಿಕ್ ಆಡಿಟ್ ನಡೆಸಿದ ವೇಳೆ, ರೋಷನ್ ಬೇಗ್ ಅವರಿಗೆ ಐಎಂಎ ಕಂಪನಿ ಮತ್ತು ಮನ್ಸೂರ್ ಖಾನ್‌ನಿಂದ ಹಣ ಪಾವತಿಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿ, ಬಂಧಿಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಐಎಂಎಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿಬಂದಿತ್ತು. ಐಎಂಎ ಅಧ್ಯಕ್ಷ ಮನ್ಸೂರ್ ಖಾನ್ ನಿಂದ ನೂರಾರು ಕೋಟಿ ರೂಪಾಯಿಯನ್ನು ರೋಷನ್ ಬೇಗ್ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ.

ಈ ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದ ಕೂಡಲೇ ಕಾಂಗ್ರೆಸ್ ಪಕ್ಷ ಹಾಗೂ ಶಿವಾಜಿನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್, ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದರು. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿಯೇ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು.

ಆದರೆ, ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್‌ ನೀಡಿ ರೋಷನ್‌ ಬೇಗ್‌ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.

ಈ ನಡುವೆ ಮನ್ಸೂರ್‌ ಖಾನ್‌ ನಾನು ರೋಷನ್‌ ಬೇಗ್‌ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್‌ ಬೇಗ್‌ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ದೂರು ನೀಡುತ್ತೇನೆ ಎಂದು ಮನ್ಸೂರ್‌ ಖಾನ್‌ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಐಎಂಎನಲ್ಲಿ ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡು ರಾಜ್ಯಗಳ ಜನರೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸಾವಿರಾರು ಜನರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ವಂಚನೆ ಮೊತ್ತವೂ ನೂರಾರು ಕೋಟಿ ರೂ. ಇದೆ ಎಂದು ಹೇಳಲಾಗಿದೆ.

ಐಎಂಎ ಜುವೆಲ್ಸ್‌ನಲ್ಲಿ 2 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಆಭರಣ ವ್ಯಾಪಾರ ಮಾಡಿ ಅದರಿಂದ ಬರುವ ಲಾಭ ಆಧರಿಸಿ ಹಣ ಮರಳಿಸುತ್ತೇವೆ.  ನಿರ್ದಿಷ್ಟ ಮೊತ್ತ ಇರುವುದಿಲ್ಲ. ಹಲಾಲ್‌ ಬಿಸಿನೆಸ್‌ (ಬಡ್ಡಿಯನ್ನು ಆಧಾರವಾಗಿರಿಸದೆ ಹೂಡಿಕೆ ಮಾಡಿ ಲಾಭ ಕೊಡುವುದು) ಆಗಿರುವ ಕಾರಣ ನಿರ್ದಿಷ್ಟ ಮೊತ್ತವೆಂದು ಹೇಳುವುದಿಲ್ಲ. ಹಾಗೇ ಹೇಳಿದರೆ ಬಡ್ಡಿ ವ್ಯವಹಾರ ಆಗುತ್ತದೆ. ಅದನ್ನು ನಾವು ಮಾಡಬಾರದು ಎಂದು ತಿಳಿಸಿದ್ದರು.

Facebook Comments

Sri Raghav

Admin