ಬ್ರೇಕಿಂಗ್ : ಐಎಂಎ ಪ್ರಕರಣದಲ್ಲಿ ರೋಷನ್‍ ಬೇಗ್‌ಗೆ ಜಾಮೀನು ನೀಡಿದ ಸಿಬಿಐ ಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.5- ಬಹುಕೋಟಿ ವಂಚನೆ ಪ್ರಕರಣವಾಗಿರುವ ಐಎಂಎ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್‍ಬೇಗ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಷನ್ ಬೇಗ್ ಅವರಿಗೆ ಜಾಮೀನು ನೀಡಬೇಕೆಂದು ವಕೀಲರು ಮಾಡಿದ್ದ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿದೆ.

ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್‍ಖಾನ್ ಅವರು ರೋಷನ್ ಬೇಗ್ ಅವರಿಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪ್ರಮುಖ ಆರೋಪಿಯ ಹೇಳಿಕೆ ಆಧರಿಸಿ ನ.23ರಂದು ಕೂಲ್ಸ್‍ಪಾರ್ಕ್‍ನಲ್ಲಿರುವ ರೋಷನ್ ಬೇಗ್ ಅವರ ಮನೆಯಲ್ಲಿ ಶೋಧಕಾರ್ಯಚರಣೆ ನಡೆಸಿ ನಂತರ ಬಂಧಿಸಿತ್ತು.

ಬಂಧನದ ಬಳಿಕ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ಹೃದ್ರೋಗದಿಂದ ಬಳಲುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾದ ಬಳಿಕ ಮತ್ತೆ ಸಿಬಿಐ ನ್ಯಾಯಾಲಯದ ಮೊರೆ ಹೋಗಿದ್ದು, ಆರೋಪಿಯ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತ್ತು.

ಈ ನಡುವೆ ರೋಷನ್‍ಬೇಗ್ ಪರ ವಕೀಲರು ಆರೋಗ್ಯದ ಕಾರಣ ಮುಂದಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿತ್ತು. ಸಿಬಿಐ ಕಸ್ಟಡಿ ಮುಗಿದ ಬಳಿಕ ಜಾಮೀನು ಅರ್ಜಿ ಪರಿಗಣಿಸುವುದಾಗಿ ಡಿ.2ರಂದು ನ್ಯಾಯಾಲಯ ಹೇಳಿತ್ತು. ಅದರಂತೆ ಇಂದು ಜಾಮೀನು ನೀಡಲಾಗಿದೆ.

Facebook Comments