ರೌಡಿ ಬಬ್ಲಿಯನ್ನು ಕೊಂದಿದ್ದ ಆರೋಪಿಗಳಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.21- ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಾಡಹಗಲೇ ಬ್ಯಾಂಕ್‍ಗೆ ನುಗ್ಗಿ ರೌಡಿ ಬಬ್ಲಿಯನ್ನು ಭೀಕರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರಲ್ಲಿ ಇಬ್ಬರು ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ. ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿರುವ ಕೊಲೆ ಆರೋಪಿಗಳನ್ನು ರವಿ ಮತ್ತು ಪ್ರದೀಪ್ ಅಲಿಯಾಸ್ ಚೊಟ್ಟೆ ಎಂದು ಗುರುತಿಸಲಾಗಿದೆ.

ರವಿ ಜೆಸಿ ನಗರದ ರೌಡಿ ಮತ್ತು ಪ್ರದೀಪ ಅಶೋಕನಗರದ ರೌಡಿ. ಇವರುಗಳು ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೋರಮಂಗಲ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಗೆ ಪ್ರತೀಕಾರವಾಗಿ ರೌಡಿ ಬಬ್ಲಿಯನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪರಾರಿಯಾಗಿರುವ ಆರೋಪಿಗಳು ಸಿಕ್ಕಿದ ನಂತರವೇ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ. ಕಳೆದ ಸೋಮವಾರ ರೌಡಿ ಬಬ್ಲಿ ತನ್ನ ಪತ್ನಿಯೊಂದಿಗೆ ಕೋರಮಂಗಲದ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್‍ಗೆ ಹೋಗಿದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬ್ಯಾಂಕ್‍ಗೆ ಎಂಟ್ರಿ ಪಡೆದಿದ್ದ ಹಂತಕರು ಪತ್ನಿ ಹಾಗೂ ಮಗಳ ಎದುರಲ್ಲೇ ಬಬ್ಲಿಯನ್ನು ಭೀಕರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಹಂತಕರ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿ ಕೊಲೆಗಾರರನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೋರಮಂಗಲ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದರು. ಆಯುಕ್ತರ ಸೂಚನೆ ಬೆನ್ನಲ್ಲೆ ಅಖಾಡಕ್ಕಿಳಿದ ಕೋರಮಂಗಲ ಠಾಣೆ ಪೊಲೀಸರು ಹಂತಕರ ಬೆನ್ನು ಬಿದ್ದಿದ್ದರು. ರವಿ ಮತ್ತು ಪ್ರದೀಪ್ ಅವರು ಬೇಗೂರು ಕೆರೆ ಸಮೀಪವಿರುವ ಮಾಹಿತಿ ದೊರೆಯಿತು.

ಇವರಿಬ್ಬರ ಬಂಧನಕ್ಕಾಗಿ ಇಂದು ಮುಂಜಾನೆ ಕಾರ್ಯಾಚರಣೆಗಿಳಿದ ಕೋರಮಂಗಲ ಠಾಣೆ ಪೊಲೀಸರು ಹಂತಕರ ಬಂಧನಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಆರೋಪಿಗಳು ಎಸ್‍ಐ ಸಿದ್ದಪ್ಪ ಮತ್ತು ಎಎಸ್‍ಐ ರವೀಂದ್ರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೋರಮಂಗಲ ಠಾಣೆ ಇನ್ಸ್‍ಪೆಕ್ಟರ್ ರವಿ ಮತ್ತು ಸಬ್‍ಇನ್ಸ್‍ಪೆಕ್ಟರ್ ಪುಟ್ಟಸ್ವಾಮಿ ಅವರುಗಳು ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಹಾರಿಸಿದ ಗುಂಡುಗಳು ಆರೋಪಿಗಳ ಕಾಲುಗಳಿಗೆ ತಗುಲಿವೆ.

ಗುಂಡೇಟಿನಿಂದ ಗಾಯಗೊಂಡು ಕುಸಿದು ಬಿದ್ದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ದಾಳಿಯಿಂದ ಗಾಯಗೊಂಡಿರುವ ಪಿಎಸ್‍ಐ ಸಿದ್ದಪ್ಪ ಹಾಗೂ ಎಎಸ್‍ಐ ರವೀಂದ್ರ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಹಂತಕರಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಆದಷ್ಟು ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ಗುತ್ತಿಗೆ ಕೆಲಸ ಮಾಡಿಕೊಂಡು ತನ್ನ ಕುಟುಂಬದ ಜತೆ ಬಬ್ಲಿ ರಾಜೇಂದ್ರನಗರದಲ್ಲಿ ವಾಸವಾಗಿದ್ದ.

Facebook Comments