ಕೊಲೆಗೆ ಸ್ಕೆಚ್ ಹಾಕಿ ಕೂತಿದ್ದ 11 ಮಂದಿಯನ್ನು ಕ್ಯಾಚ್ ಹಾಕಿದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.24- ಎರಡು ಕಾರು ಗಳಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ಸಾರ್ವಜನಿಕರ ದೋಚಲು ಹಾಗೂ ಎದುರಾಳಿ ಗುಂಪಿನ ಸಹಚರರನ್ನು ಕೊಲೆ ಮಾಡಲು ಸಜ್ಜಾಗಿದ್ದ ಮಂಗಳೂರು ಮೂಲದ ಇಬ್ಬರು ರೌಡಿಗಳು ಸೇರಿದಂತೆ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹರೀಶ (27), ವೆಂಕಟೇಶ್ (27), ಕಿರಣ್‍ಗೌಡ (30), ವಿಶ್ವನಾಥ್ ಬಂಡಾರಿ (32), ಸತೀಶ್ (27), ಹೇಮಂತ್ (28), ಗಣೇಶ್ (27), ವಿನೋದ್ (28), ಗಣೇಶ್ (27), ಕಿರಣ್‍ಕುಮಾರ್ (27), ಅಣ್ಣಾಮಲೈ (29) ಬಂಧಿತರು.

ಆರೋಪಿ ಹರೀಶ ಆನೇಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವೆಂಕಟೇಶ್ ಸರ್ಜಾಪುರ ಠಾಣೆಯ ರೌಡಿ ಶೀಟರ್. ಈತನ ವಿರುದ್ಧ ಕೊಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ಕಿರಣ್‍ಗೌಡ ಮಂಗಳೂರು ಉತ್ತರ ಪೊಲೀಸ್ ಠಾಣೆಯ ರೌಡಿ ಶೀಟರ್. ಈತ ಮಂಗಳೂರು ಮೂಲದ ರೌಡಿ ಸಹಚರನಾಗಿದ್ದು, ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿ 12 ಪ್ರಕರಣಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ವಿಶ್ವನಾಥ್ ಭಂಡಾರಿ ಸಹ ಮಂಗಳೂರು ಉಲ್ಲಾಳ ಪೊಲೀಸ್ ಠಾಣೆಯ ರೌಡಿ ಶೀಟರ್. ಈತ ಮಂಗಳೂರು ಮೂಲದ ರೌಡಿ ಸಹಚರನಾಗಿದ್ದು, ಈತನ ವಿರುದ್ಧ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳಾದ ಕಿರಣ್‍ಗೌಡ ಮತ್ತು ವಿಶ್ವನಾಥ್ ಭಂಡಾರಿ, ರೌಡಿ ಕಾಡುಬೀಸನಹಳ್ಳಿ ರೋಹಿತ್ ಸಹಚರರು.

ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿಸುವ ಸಲುವಾಗಿಯೇ ರೋಹಿತ್ ಮಂಗಳೂರಿನಿಂದ 20 ದಿನಗಳ ಹಿಂದೆಯೇ ಕಿರಣ್‍ಗೌಡ ಮತ್ತು ವಿಶ್ವನಾಥ್ ಬಂಡಾರಿಯನ್ನು ಕರೆಸಿ ಕರಿಯಮ್ಮನ ಅಗ್ರಹಾರದಲ್ಲಿ ತನ್ನ ಜತೆ ಇಟ್ಟುಕೊಂಡು ಸೋಮ ಮತ್ತು ಆತನ ಸಹಚರರ ಚಲನವಲನಗಳ ಬಗ್ಗೆ ಗಮನಿಸುತ್ತಿದ್ದುದು ತನಿಖೆ ಸಮಯದಲ್ಲಿ ತಿಳಿದುಬಂದಿದೆ.

ಆರೋಪಿಗಳಿಂದ ಸಿಸಿಬಿ ಪೊಲೀಸರು 18 ಮಾರಕಾಸ್ತ್ರಗಳು, ಸ್ಕಾರ್ಪಿಯೋ ಕಾರು, ಹುಂಡೈ ಐ-20 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments