ಪೊಲೀಸರ ಮೇಲೆ ಹಲ್ಲೆಗೆ ಯತ್ನ ಯತ್ನಿಸಿದ ರೌಡಿ ಗೊಣ್ಣೆ ವಿಜಿಗೆ ಗುಂಡೇಟು..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ಚಾಕು ಹಿಡಿದು ನಡುರಸ್ತೆಯಲ್ಲೇ ನಿಂತುಕೊಂಡು ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರೌಡಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ವಿಜಯ್ ಅಲಿಯಾಸ್ ಗೊಣ್ಣೆ ವಿಜಿ (23) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ರೌಡಿ. ವಿಜಯ್ ಗಿರಿನಗರ ಪೊಲೀಸ್ ಠಾಣೆಯ ರೌಡಿ ಶೀಟರ್. ಈ ಮೊದಲು ಗಿರಿನಗರದಲ್ಲಿ ನೆಲೆಸಿದ್ದ ಈತ ಇತ್ತೀಚೆಗೆ ಜಯನಗರದಲ್ಲಿ ವಾಸಿಸುತ್ತಿದ್ದಾನೆ.

ಈತನ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ದರೋಡೆ, ಸುಲಿಗೆ, ಕೊಲೆಯತ್ನ, ಕಳ್ಳತನ ಸೇರಿದಂತೆ 19 ಪ್ರಕರಣಗಳು ದಾಖಲಾಗಿವೆ.
ಕಳೆದ ಅಕ್ಟೋಬರ್‍ನಲ್ಲಿ ಗಿರಿನಗರಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ರೌಡಿ ವಿಜಯ್ ಕಳೆದ 13ರಂದು ಜೈಲಿನಿಂದ ಹೊರಬಂದಿದ್ದನು.
ರಾತ್ರಿ 11.30ರ ಸುಮಾರಿನಲ್ಲಿ ಪಿಇಎಸ್ ಕಾಲೇಜು ಎದುರಿನ ರಿಂಗ್‍ರಸ್ತೆಯಲ್ಲಿ ಉದ್ದವಾದ ಚಾಕು ಹಿಡಿದು ನಿಂತುಕೊಂಡು ವಾಹನ ಸವಾರರು ಹಾಗೂ ದಾರಿಹೋಕರನ್ನು ಅಡ್ಡಗಟ್ಟಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದನು.

ಈ ಬಗ್ಗೆ ಗಿರಿನಗರ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಸಬ್‍ಇನ್ಸ್‍ಪೆಕ್ಟರ್ ವಿನಯ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಪೊಲೀಸರನ್ನು ನೋಡಿದ ಆರೋಪಿ ವಿಜಯ್‍ಕುಮಾರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ಚಾಕುವಿನಿಂದ ಕಾನ್ಸ್‍ಟೆಬಲ್ ಮಧುಸೂದನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಸಬ್‍ಇನ್ಸ್‍ಪೆಕ್ಟರ್ ವಿನಯ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಮತ್ತೆ ಹಲ್ಲೆಗೆ ಮುಂದಾದಾಗ ಸಬ್‍ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ರೌಡಿ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ಬಂಧಿಸಿ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್ಸ್‍ಟೆಬಲ್ ಮಧುಸೂದನ್ ಅವರೂ ಸಹ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿ ಹಾಗೂ ಕಾನ್ಸ್‍ಟೆಬಲ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Facebook Comments