ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಗೆ ಪೊಲೀಸರ ಗುಂಡೇಟು, ಸೆರೆ
ಬೆಂಗಳೂರು, ಜ.17- ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಸವಾಲೆಸೆದು ತಲೆ ಮರೆಸಿಕೊಂಡಿದ್ದ ಕುಖ್ಯಾತ ರೌಡಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಸೆರೆ ಹಿಡಿಯುವಲ್ಲಿ ಹನುಮಂತನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ (22) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ.
ಈತನ ವಿರುದ್ಧ 4 ಕೊಲೆಯತ್ನ ಪ್ರಕರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ 8 ವಾರೆಂಟ್ಗಳಿವೆ. ಈತ ರೌಡಿಶೀಟರ್ ಕುಳ್ಳ ರಿಜ್ವಾನ್ ಸಹಚರನಾಗಿರುವ ಆರೋಪಿ ರಾಹುಲ್ ಗಾಂಜಾ ಪ್ರಕರಣದಲ್ಲಿ ಹನುಮಂತನಗರ ಠಾಣೆ ಪೊಲೀಸರಿಗೆ ಬೇಕಾಗಿದ್ದನು. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಇತ್ತೀಚೆಗೆ ವಿಡಿಯೋವೊಂದನ್ನು ಮಾಡಿ ಪೊಲೀಸರನ್ನು ನಿಂಧಿಸಿ ನನ್ನನ್ನು ಬಂಧಿಸಲು ಆಗುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದನು. ಈ ಮೊದಲು ತ್ಯಾಗರಾಜನಗರದಲ್ಲಿ ನೆಲೆಸಿದ್ದ ಆರೋಪಿ ರಾಹುಲ್, ಇದೀಗ ಬನ್ನೇರುಘಟ್ಟದಲ್ಲಿ ತನ್ನ ವಾಸ್ತವ್ಯ ಬದಲಿಸಿದ್ದನು.
ಇಂದು ಬೆಳಗಿನ ಜಾವ 4.30ರ ಸುಮಾರಿನಲ್ಲಿ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣನಗರದ ಬಳಿ ಸ್ಕೂಟರ್ನಲ್ಲಿ ಆರೋಪಿ ರಾಹುಲ್ ಬರುತ್ತಿದ್ದಾನೆಂಬ ಮಾಹಿತಿ ಹನುಮಂತನಗರ ಠಾಣೆ ಪೊಲೀಸರಿಗೆ ಲಭಿಸಿದೆ.ತಕ್ಷಣ ಸಬ್ಇನ್ಸ್ಪೆಕ್ಟರ್ ಬಸವರಾಜ್ ಪಾಟೀಲ್ ಅವರು ಹೆಡ್ ಕಾನ್ಸ್ಟೆಬಲ್ ನಿಂಗಪ್ಪ ಮತ್ತಿತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿದ್ದಾರೆ.
ಪೊಲೀಸರನ್ನು ಕಂಡ ತಕ್ಷಣ ಆರೋಪಿಯು ಹೆಡ್ಕಾನ್ಸ್ಟೆಬಲ್ ನಿಂಗಪ್ಪ ಅವರ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣ ಸಬ್ಇನ್ಸ್ಪೆಕ್ಟರ್ ಬಸವರಾಜ್ ಪಾಟೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.
ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಸಬ್ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿದಾಗ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಡ್ಕಾನ್ಸ್ಟೆಬಲ್ ನಿಂಗಪ್ಪ ಅವರು ದಕ್ಷಿಣ ವಿಭಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.