ಗೂಂಡಾ ಕಾಯ್ದೆಯಡಿ ರೌಡಿ ಕಾರ್ತಿಕ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ರೌಡಿ ಚಟುವಟಿಕೆಗಳನ್ನು ಮುಂದುವರೆಸುತ್ತ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿ ಶಾಂತಿ-ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದ ರೌಡಿ ಕಾರ್ತಿಕ್‍ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಹಲಸೂರು ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಕಾರ್ತಿಕ್(29) ಹಲಸೂರಿನ ಗೌತಮಪುರದ 8ನೇ ಕ್ರಾಸ್‍ನಲ್ಲಿ ವಾಸವಾಗಿದ್ದನು.

ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರ ಆದೇಶದಂತೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಕಾರ್ತಿಕ್ ಹಲಸೂರು ಠಾಣೆಯ 6 ಪ್ರಕರಣ, ಇಂದಿರಾನಗರ 3, ಕಲಾಸಿಪಾಳ್ಯ ಠಾಣೆಯಲ್ಲಿ ಒಂದು ಪ್ರಕರಣ ಸೇರಿ ಒಟ್ಟು 10ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಸುಲಿಗೆ, ಅಪಹರಣ, ಅತ್ಯಾಚಾರ, 2 ಕೊಲೆಗೆ ಯತ್ನ, ಸರ್ಕಾರಿ ನೌಕರನ ಮೇಲೆ ಹಲ್ಲೆ, ಬಲಾದ್ಗ್ರಹಣ, 2 ಹಲ್ಲೆ, 2 ದೊಂಬಿ ಪ್ರಕರಣಗಳು ದಾಖಲಾಗಿರುತ್ತವೆ.

ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅಪಹರಣ, ಅತ್ಯಾಚಾರ ಪ್ರಕರಣಗಳಲ್ಲಿ ಈತನಿಗೆ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿರುತ್ತದೆ. ರೌಡಿ ಪಟ್ಟಿಯಲ್ಲಿದ್ದ ಕಾರ್ತಿಕ್ ಅಲಿಯಾಸ್ ರಾಹುಲ್ ವಿರುದ್ಧ ಹಲಸೂರು ಠಾಣೆಯಲ್ಲಿ ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸಿ ಮುಚ್ಚಳಿಕೆಯನ್ನು ಪಡೆದುಕೊಂಡಿದ್ದರೂ ಸಹ ತನ್ನ ರೌಡಿ ಚಟುವಟಿಕೆಗಳನ್ನು ಮುಂದುವರೆಸಿದ್ದನು.

ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಅವರ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರಿಂದ ಪೂರ್ವ ವಿಭಾಗದ ಉಪಪೊಲೀಸ್ ಕಮೀಷನರ್ ಡಾ.ಶರಣಪ್ಪ ಅವರ ನಿರ್ದೇಶನದಂತೆ ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್ ಅವರು ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಆಯುಕ್ತರಿಗೆ ವರದಿ ಸಲ್ಲಿಸಿದ್ದರು.

Facebook Comments