ದರೋಡೆಗೆ ಸ್ಕೆಚ್ ಹಾಕಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿ ಹಾಗೂ ಸಹಚರರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kunigal-Giri--01

ಬೆಂಗಳೂರು, ಆ.1-ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿ ಹಾಗೂ ಆತನ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮೋದುರು ಬಳಿಯ ಹೊಸೂರು ಗ್ರಾಮ ನಿವಾಸಿಯಾದ ಗಿರೀಶ್ ಎಚ್.ವಿ ಅಲಿಯಾಸ್ ಕುಣಿಗಲ್ ಗಿರಿ (31) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ಧ ದರೋಡೆ, ದರೋಡೆಯತ್ನ, ರಾಬರಿ ಸೇರಿದಂತೆ 90ಕ್ಕೂ ಅಧಿಕ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ಕುಣಿಗಲ್ ತಾಲೂಕಿನ ಅಮೃತೂರಿನ ಕೆ.ಹೊನ್ನಮಾಚನಹಳ್ಳಿಯ ಶ್ರೀನಿವಾಸ್ (30), ಕುಣಿಗಲ್‍ನ ಹೊಸೂರು ಗ್ರಾಮದ ವಿನೋದ್ ಎಚ್.ವಿ. (24) ಹಾಗೂ ಬೆಂಗಳೂರಿನದ ಲಗ್ಗೆರೆಯ 50 ಅಡಿ ರಸ್ತೆ, ಚೌಡೇಶ್ವರಿನಗರ ನಿವಾಸಿ ಆನಂದ್ ಕುಮಾರ್ (28) ಬಂಧಿತ ಇತರ ಆರೋಪಿಗಳಾಗಿದ್ದಾರೆ. ಇವರು ಕುಣಿಗಲ್ ಗಿರಿಯ ಸಹಚರರು ಎನ್ನಲಾಗಿದೆ.

ಆರೋಪಿ ಶ್ರೀನಿವಾಸ್ ಕೂಡ ಹನುಮಂತನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ದರೋಡೆ, ದರೋಡೆಯತ್ನ, ರಾಬರಿ ಸೇರಿ 45ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ನಿನ್ನೆ ರಾತ್ರಿ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ಮುಖ್ಯರಸ್ತೆಯಿಂದ ಜಿ.ಕೆ.ಡಬ್ಲ್ಯು ಬಡಾವಣೆ ಕಡೆ ಹೋಗುವ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಉದ್ಯಮಿಯೊಬ್ಬರ ದರೋಡೆಗೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಕುಣಿಗಲ್ ಗಿರಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದು ಕಬ್ಬಿಣದ ಲಾಂಗ್, ಒಂದು ಸ್ಟೀಲ್ ರಾಡ್, ಒಂದು ಹಾಕಿ ಬ್ಯಾಟ್, ಕಾರದಪುಡಿಯ ಪೊಟ್ಟಣ, ಒಂದು ಸಿಲ್ವರ್ ಬಣ್ಣದ ಇನೋವಾ ಕಾರನ್ನು ವಶಪಡಿಸಿಕೊಂಡು , ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಅಪರಾಧ ವಿಭಾಗದ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತ ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಪ್ರಕಾಶ್, ಎಎಸ್‍ಐ ದೇವರಾಜು ಮತ್ತು ಸಿಬ್ಬಂದಿಗಳಾದ ಸತೀಶ್ ನರಸಿಂಹಮೂರ್ತಿ, ಅರುಣ್ ಕುಮಾರ್, ಸತೀಶ್ ಕುಮಾರ್ ಆನಂದ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin