ಹೆಡ್‍ಕಾನ್‍ಸ್ಟೆಬಲ್ ಮೇಲೆ ರೌಡಿಶೀಟರ್ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.20- ಪೊಲೀಸ್ ಹೆಡ್‍ಕಾನ್‍ಸ್ಟೆಬಲ್ ಒಬ್ಬರಿಗೆ ರೌಡಿಶೀಟರ್ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12ಗಂಟೆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಹೇಮರಾಜ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಮಂಜುನಾಥ್ ಅವರಿಗೆ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮು ಹಲ್ಲೆ ಮಾಡಿದ್ದಾನೆ.

ರೌಡಿಶೀಟರ್‍ನ ಸಹೋದರಿ ಲತಾ ಎಂಬುವರು ದೇವರಾಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಾರೆ. ನಿನ್ನೆ ರಾತ್ರಿ 11 ಗಂಟೆಯಾದರೂ ಅಂಗಡಿ ತೆರೆದಿದ್ದರಿಂದ ಹೆಡ್‍ಕಾನ್‍ಸ್ಟೆಬಲ್ ಮಂಜುನಾಥ್ ಅಂಗಡಿ ಮುಚ್ಚುವಂತೆ ಸೂಚಿಸಿದ್ದಾರೆ. ಆಗ ರೌಡಿಶೀಟರ್ ಸೋಮಶೇಖರ್ ಹಾಗೂ ಸಹೋದರ ಚಂದ್ರಶೇಖರ್ ಸ್ಥಳದಲ್ಲಿದ್ದು ಹೆಡ್‍ಕಾನ್ಸ್‍ಟೆಬಲ್ ಜತೆ ಜಗಳ ತೆಗೆದಿದ್ದಾರೆ. ಮಾತಿನ ಚಕಮಕಿ ಜೋರಾಗಿ ಮಂಜುನಾಥ್ ಅವರ ಮೇಲೆ ಸೋಮು ಹಲ್ಲೆ ನಡೆಸಿದ್ದಾನೆ.

ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಸೋಮು, ಚಂದ್ರಶೇಖರ್ ಹಾಗೂ ಲತಾ ವಿರುದ್ಧ ದೂರು ದಾಖಲಿಸಿಕೊಂಡು ಸೋಮು ಮತ್ತು ಚಂದ್ರಶೇಖರ್‍ನನ್ನು ಬಂಧಿಸಿದ್ದಾರೆ. ಲತಾ ತಲೆ ಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರೌಡಿ ಸೋಮಶೇಖರನನ್ನು ಪೊಲೀಸರು ಗಡಿಪಾರು ಮಾಡಿದ್ದರು.

Facebook Comments