ಜೈಲಿನಿಂದ ಹೊರ ಬಂದಿದ್ದ ರೌಡಿಯನ್ನು ಕೊಚ್ಚಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.21- ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ ರೌಡಿಯನ್ನು ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಜ್ ಗಾರ್ಡನ್‍ನ ಎಂಜಿ ಗಾರ್ಡನ್ ನಿವಾಸಿ ರವಿವರ್ಮ ಅಲಿಯಾಸ್ ಅಪ್ಪು (30) ಕೊಲೆಯಾದ ರೌಡಿ ಶೀಟರ್.

ವಿವೇಕನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಪ್ರಕರಣವೊಂದರ ಸಂಬಂಧ ಜೈಲುಶಿಕ್ಷೆಗೊಳಗಾಗಿದ್ದ ರವಿವರ್ಮ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದನು. ರಾತ್ರಿ 9 ಗಂಟೆ ಸುಮಾರಿನಲ್ಲಿ ಮನೆ ಸಮೀಪ ನೂರು ಮೀಟರ್ ಅಂತರದಲ್ಲಿ ನಡೆದು ಹೋಗುತ್ತಿದ್ದಾಗ ಐದಾರು ಮಂದಿ ದುಷ್ಕರ್ಮಿಗಳು ಏಕಾಏಕಿ ಈತನ ಮೇಲೆ ಮಚ್ಚು, ಲಾಂಗ್‍ಗಳಿಂದ ದಾಳಿ ಮಾಡಿ ಮನಬಂದಂತೆ ತಲೆ, ಇನ್ನಿತರ ಭಾಗಗಳಿಗೆ ಒಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಯಾವ ಕಾರಣಕ್ಕಾಗಿ ರೌಡಿ ರವಿವರ್ಮನನ್ನು ಕೊಲೆ ಮಾಡಿದ್ದಾರೆಂಬ ಬಗ್ಗೆ ತನಿಖೆ ಮುಂದುವರಿದಿದೆ.

Facebook Comments