ರೌಡಿ ಸಂಜಯ್ ಮತ್ತು ಸಹಚರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ದಾರಿಹೋಕರನ್ನು ಬೆದರಿಸಿ ಹಣ, ಆಭರಣ ದೋಚಲು ಹೊಂಚು ಹಾಕುತ್ತಿದ್ದ ರೌಡಿ ಸಂಜಯ್ ಮತ್ತು ಈತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ವೃಷಭಾವತಿನಗರದ ಸಂಜಯ್ ಅಲಿಯಾಸ್ ಸಂಜು(25), ಶ್ರೀನಿವಾಸ ನಗರದ ಚಂದನ್ (23), ಕಿರಣ್(28), ಗಿರಿನಗರದ ನಂದೀಶ್(21), ಹೊಸಕೆರೆಹಳ್ಳಿಯ ಸುಭಾಷ್(21)ನನ್ನು ಬಂಧಿಸಲಾಗಿದೆ.

ರಾತ್ರಿ10 ಗಂಟೆ ಸುಮಾರಿನಲ್ಲಿ ಗಿರಿನಗರ ವ್ಯಾಪ್ತಿಯ ಬನಶಂಕರಿ 3ನೇ ಹಂತ, ವಿವೇಕಾನಂದ ಪಾರ್ಕ್ ಸಮೀಪದ ಯೋಗಾ ಟ್ರೈನಿಂಗ್ ಸೆಂಟರ್ ಮುಂಭಾಗ ಕತ್ತಲಲ್ಲಿ ಇವರೆಲ್ಲ ಮಾರಕಾಸ್ತ್ರಗಳನ್ನಿಡಿದು ಸಾರ್ವಜನಿಕರಿಂದ ಹಣ ಆಭರಣ ದೋಚಲು ಹೊಂಚು ಹಾಕುತ್ತಿದ್ದರು.  ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ರೌಡಿ ಸಂಜಯ್ ಸೇರಿದಂತೆ 5 ಮಂದಿ ಸಹಚರರನ್ನು ಬಂಧಿಸಿ ಆಟೋ ರಿಕ್ಷಾ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಜಯ್ ವಿಜಯನಗರ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೆ ರಾಜಗೋಪಾಲ ನಗರ ಠಾಣೆಯಲ್ಲಿ ದಿಲೀಪ್ ಎಂಬಾತನ ಕೊಲೆ ಪ್ರಕರಣ ಮತ್ತು ಕುಣಿಗಲ್, ವಿಜಯನಗರ, ಆರ್‍ಎಂಸಿಯಾರ್ಡ್ ಠಾಣೆಯಲ್ಲಿ ಕೊಲೆಯತ್ನದ ಪ್ರಕರಣಗಳು ಮತ್ತು ರಾಜರಾಜೇಶ್ವರಿನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಆರ್‍ಎಂಸಿಯಾರ್ಡ್ ಠಾಣೆಯಲ್ಲಿ ದಾಖಲಾಗಿರುವ ಕೊಲೆಯತ್ನ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದನು.

ಆರೋಪಿ ಚಂದನ್ ಮೇಲೆ ಹನುಮಂತನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದರೆ, ಶುಭಾಷ್ ಮೇಲೆ ಆರ್‍ಎಂಸಿಯಾರ್ಡ್ ಠಾಣೆಯಲ್ಲಿ ದಾಖಲಾಗಿರುವ ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದನು.  ಆರೋಪಿ ಗಂಗಾಧರ್ ಅಮೃತಹಳ್ಳಿ ಠಾಣೆಯ ರೌಡಿ ಪಟ್ಟಿಯಲ್ಲಿದ್ದು ಈತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Facebook Comments