ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿದ್ದ ರೌಡಿ ಸೇರಿ 7 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.17-ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಸಿನಿಮೀಯ ರೀತಿಯಲ್ಲಿ ಕಾರಿನಿಂದ ಡಿಕ್ಕಿ ಹೊಡೆಸಿ ನಂತರ ಆತನನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ರೌಡಿಶೀಟರ್ ಸೇರಿ ಏಳು ಮಂದಿಯನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಟ್ಟಿಗೆಗೂಡಿನ ನಿವಾಸಿ ರೌಡಿಶೀಟರ್ ಆಕರ್ಷ್(25), ಕೃಷ್ಣಮೂರ್ತಿಪುರ ನಿವಾಸಿ ನಿತಿನ್(27), ಜಯಂತ್(22), ಸರಸ್ವತಿಪುರಂ ನಿವಾಸಿ ಮಂಜುನಾಥ್(20), ಕೊಡಗು ಜಿಲ್ಲೆ ಸೋಮವಾರಪೇಟೆಯ ಭರತ್(23), ನಂಜನಗೂಡು ತಾಲೂಕಿನ ಹಳಿದಿಡ್ಡಿ ನಿವಾಸಿ ಚೇತನ್(20), ಚಂದ್ರು ಬಂಧಿತ ಆರೋಪಿಗಳು.

ಘಟನೆ ವಿವರ: ಜ.14 ರಂದು ರಾತ್ರಿ ಕೆ.ಆರ್.ಮೊಹಲ್ಲಾ ನಿವಾಸಿ ಅನಿಲ್ ಎಂಬುವರು ಸಿದ್ದಪ್ಪ ಚೌಕದ ಬಳಿ ತಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅನಿಲ್ ಅವರ ಬಳಿ ಆರೋಪಿ ನಿತಿನ್ ಬೆಂಕಿಪೊಟ್ಟಣ ಕೇಳಿದ್ದಾನೆ. ಆಗ ಅನಿಲ್ ಇಲ್ಲ ಎಂದು ಹೇಳಿದ್ದಾರೆ.  ಇದರಿಂದ ಕೋಪಗೊಂಡ ನಿತಿನ್, ಅನಿಲ್ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾನೆ.

ನಂತರ ಅನಿಲ್ ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳಿ ಸ್ನೇಹಿತನನ್ನು ಮನೆಗೆ ಬಿಟ್ಟು ತೆರಳುತ್ತಿದ್ದಾಗ, ನಿತಿನ್ ತಮ್ಮ ಸಹಚರರೊಂದಿಗೆ ಕಾರಿನಲ್ಲಿ ಬಂದು ಅನಿಲ್ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾನೆ. ನಂತರ ಕಾರಿನಲ್ಲಿ ಅನಿಲ್‍ನನ್ನು ಅಪಹರಿಸಿ ಸರಸ್ವತಿಪುರಂನ ಕೋಣೆಯೊಂದರಲ್ಲಿ ಬಂಧಿಸಿ ಆತನ ಬಳಿ 50 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.

ಜ.15 ರಂದು ಅನಿಲ್ ಕೋಣೆಯಿಂದ ತಪ್ಪಿಸಿಕೊಂಡು ಕೆ.ಆರ್.ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.  ಬಂಧಿತರಿಂದ ಒಂದು ಕಾರು, 4 ಬೈಕ್, 6 ಮೊಬೈಲ್, 4 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್, ಎಎಸ್‍ಐ ಸುರೇಶ್, ಸಿಬ್ಬಂದಿ ಅನಿಲ್, ಮಕಂದರ್ ಶರೀಫ್, ರಮೇಶ್, ಮಧು, ಶಿವಕುಮಾರಸ್ವಾಮಿ , ಮಣಿಕಂಠ ಪ್ರಸಾದ್ ಕಾರ್ಯಾಚರಣೆಯಲ್ಲಿದ್ದರು.

Facebook Comments