ಭಯಾನಕವಾಗಿದೆ ಸ್ಲಂ ಭರತನ ಕ್ರೈಮ್ ಹಿಸ್ಟರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿ ತನ್ನದೇ ಹವಾ ಸೃಷ್ಟಿಸಿಕೊಂಡು ಮೆರೆದಾಡುತ್ತಿದ್ದ ಸ್ಲಂ ಭರತ ಪೊಲೀಸರ ಕಾರ್ಯಾಚರಣೆ ವೇಳೆ ಹತನಾಗಿರುವುದು ಉಳಿದ ರೌಡಿಗಳಿಗೆ ಎಚ್ಚರಿಕೆಯಾಗಿದೆ. ಆರೋಪಿ ಭರತ್ ಅಲಿಯಾಸ್ ಸ್ಲಂ ಭರತ್ ಮತ್ತು ಈತನ ಸಹಚರರು ಬೆಂಗಳೂರು ನಗರ ಅಂಡರ್‍ವಲ್ರ್ಡ್ ಅಧಿಪತ್ಯ ಹೊಂದಲು ಸುಮಾರು 150 ಜನ ಸಹಚರರನ್ನಿಟ್ಟುಕೊಂಡು ಅಮಾಯಕ ಸಾರ್ವಜನಿಕರಿಗೆ ಬೆದರಿಕೆ ಒಡ್ಡುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ.

ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಜ.19ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಶ್ರೀನಿವಾಸ್ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಭರತ್ ಮತ್ತು ಆತನ ಆರು ಮಂದಿ ಸಹಚರರು ದೊಣ್ಣೆ, ಲಾಂಗು, ಮಚ್ಚಿನಿಂದ ಹೊಡೆದು ಜಖಂಗೊಳಿಸಿ ದಾಳಿ ಮಾಡಲು ಯತ್ನಿಸಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಕೊಲೆ ಬೆದರಿಕೆ, ಸಾರ್ವಜನಿಕ ಆಸ್ತಿ ನಷ್ಟ ಉಂಟುಮಾಡಿರುವ ಪ್ರಕರಣ ಈತನ ಮೇಲೆ ದಾಖಲಾಗಿದೆ.

ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಜ.19ರಂದು ಬೆಳಗಿನ ಜಾವ 2.30 ರಿಂದ 3 ಗಂಟೆ ಸುಮಾರಿನಲ್ಲಿ ಆಕ್ಸ್‍ಫರ್ಡ್ ಶಾಲೆ ಹತ್ತಿರ ಚೇತನ್ ಎಂಬುವವರು ಕಾರಿನಲ್ಲಿ ಮಲಗಿದ್ದಾಗ ರೌಡಿ ಸ್ಲಂ ಭರತ ಮತ್ತು ಈತನ ಸಹಚರರು ಕಾರನ್ನು ಜಖಂಗೊಳಿಸಿ ಚೇತನ್ ಅವರನ್ನು ಬೆದರಿಸಿ 22 ಸಾವಿರ ಹಣ, 2 ಮೊಬೈಲ್ ಹಾಗೂ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ.

ಪೀಣ್ಯ ವ್ಯಾಪ್ತಿಯಲ್ಲಿನ ತಿಪ್ಪೇನಹಳ್ಳಿಯ ಡೆಲ್ಲಿ ಪಬ್ಲಿಕ್ ಶಾಲೆ ಸಮೀಪ ಹೊಂಬೆಗೌಡ ನಗರ ರಸ್ತೆಯಲ್ಲಿ ಜ.1ರಂದು ರಾತ್ರಿ 12 ಗಂಟೆ ಸುಮಾರಿನಲ್ಲಿ ಗಿರೀಶ್ ಎಂಬುವವರಿಗೆ ಪಿಸ್ತೂಲು ತೋರಿಸಿ ಹೆದರಿಸಿ 16,500ರೂ. ಹಣ, 3 ಮೊಬೈಲ್ ಮತ್ತು ಕಾರನ್ನು ಕಿತ್ತುಕೊಂಡು ಹೋಗಿದ್ದರು. ಘಟನೆ ಸಂಬಂಧ ಪೀಣ್ಯ ಠಾಣೆಯಲ್ಲಿ ಡಕಾಯಿತಿ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಜ.21ರಂದು ಮಧ್ಯರಾತ್ರಿ 1.40ರ ಸುಮಾರಿನಲ್ಲಿ ಗಸ್ತಿನಲ್ಲಿದ್ದ ಶ್ರೀನಿವಾಸ್ ಮತ್ತು ಸಿದ್ದಲಿಂಗ ಮೂರ್ತಿ ಅವರು ಗಸ್ತಿನಲ್ಲಿದ್ದಾಗ ಈ ಮಾರ್ಗವಾಗಿ ಬಂದ ಕಾರನ್ನು ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ಸ್ಲಂ ಭರತ ಮತ್ತು ಆರು ಮಂದಿ ಸಹಚರರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಸೋಲದೇವನಹಳ್ಳಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

ಜ.24ರಂದು ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿ ಭರತ ಹಾಗೂ ಈತನ ಸಹಚರರು ಇರುವ ಬಗ್ಗೆ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಗಳು ಆತನನ್ನು ಬಂಧಿಸಲು ಹೋಗುತ್ತಿದ್ದಂತೆ ಕಾರನ್ನು ಪೊಲೀಸರ ಮೇಲೆ ಹತ್ತಿಸಿಕೊಂಡು ಹೋಗಲು ಯತ್ನಿಸಿ ಪರಾರಿಯಾಗಿದ್ದರು. ಜ.28ರಂದು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಔತಣಕೂಟವೊಂದರಲ್ಲಿ ಆರೋಪಿ ಸ್ಲಂ ಭರತ ಭಾಗಿಯಾಗಿರುವ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಹೋಗುತ್ತಿದ್ದಂತೆ ಇವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಬಗ್ಗೆ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸ್ಲಂ ಭರತ ಮತ್ತು ಈತನ ಸಹಚರರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಭರತನ ಮೇಲೆ ರಾಜಗೋಪಾಲನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಅಲ್ಲದೆ, ಬೇರೆ ಬೇರೆ ಆರು ಪೊಲೀಸ್ ಠಾಣೆಗಳಲ್ಲಿನ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಆರೋಪಿ ಸ್ಲಂ ಭರತ ಮತ್ತು ಈತನ ಸಹಚರರ ಮೇಲೆ ಬೆಂಗಳೂರು ನಗರ ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ 41 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಸ್ಲಂ ಭರತ ಉತ್ತರ ಪ್ರದೇಶ ರಾಜ್ಯದ ಮುನೀರಾಬಾದ್‍ನಲ್ಲಿ ಸ್ನೇಹಿತೆ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಒಂದು ವಿಶೇಷ ತಂಡ ಆತನನ್ನು ಬಂಧಿಸಲು ಹೋದಾಗ ಭರತ ಹಾಗೂ ಸ್ನೇಹಿತೆ ಕುಟುಂಬದವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ಉತ್ತರ ಪ್ರದೇಶ ರಾಜ್ಯದ ಗಲತ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.

#ಸ್ಲಂ ಭರತನ ಸಹಚರರು ವಶಕ್ಕೆ: ಆರೋಪಿ ಸ್ಲಂ ಭರತ ಪೊಲೀಸರಿಂದ ಎನ್‍ಕೌಂಟರ್ ಆಗಿರುವ ಸುದ್ದಿ ತಿಳಿದು ಆತನ ಮೃತದೇಹವಿರುವ ಸಪ್ತಗಿರಿ ಆಸ್ಪತ್ರೆ ಬಳಿ ಬಂದ 10ಕ್ಕೂ ಹೆಚ್ಚು ಸಹಚರರನ್ನು ಬಗಲಗುಂಟೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಇಂದು ಬೆಳಗ್ಗೆ ಪೊಲೀಸರ ಕಾರ್ಯಾಚರಣೆ ವೇಳೆ ಪೊಲೀಸರತ್ತ ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗುವಾಗ ಆತ್ಮರಕ್ಷಣೆಗಾಗಿ ಆತ್ಮ ರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡೇಟು ತಗುಲಿ ಸಾವನ್ನಪ್ಪಿರುವ ಸುದ್ದಿ ತಿಳಿದ ಈತನ ಸಹಚರರು ಮೃತದೇಹ ನೋಡಲು ಸಪ್ತಗಿರಿ ಆಸ್ಪತ್ರೆ ಬಳಿ ಬಂದಿದ್ದರು.  ತಕ್ಷಣ ಬಗಲಗುಂಟೆ ಠಾಣೆ ಪೊಲೀಸರು 10ಕ್ಕೂ ಹೆಚ್ಚು ಮಂದಿ ಸಹಚರರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ.

Facebook Comments