“ಯಾರು ಎಷ್ಟೇ ನಿಂದಿಸಿದರೂ ಎದೆಗುಂದುವುದಿಲ್ಲ” : ಕುಸುಮಾ ಅವರ EXCLUSIVE ಸಂದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15- ದಕ್ಷ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಎಚ್. ಅಚ್ಚರಿಯ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲೇ ಈ ಕ್ಷೇತ್ರ ಕುತೂಹಲದ ಕುಲುಮೆಯಾಗಿದೆ. ಅಭ್ಯರ್ಥಿಯಾದ ಬಳಿಕ ಕುಸುಮಾ ಅವರು ಈ ಸಂಜೆಯೊಂದಿಗೆ ಮಾತನಾಡಿ, ಸಾಕಷ್ಟು ನೋವುಂಡು ಜೀವಿಸಿದ್ದೇನೆ. ಜನ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ. ಇನ್ನೂ ಮುಂದೆ ಏನೇ ಆಗಲಿ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಯಾವುದೇ ಸಂದರ್ಭದಲ್ಲೂ ವಿಚಲಿತಳಾಗುವುದಿಲ್ಲ. ನೋವು ಮಾಡುತ್ತಿರುವವರು ಚೆನ್ನಾಗಿರಲಿ ಎಂದಿದ್ದಾರೆ.

# ರಾಜಕಾರಣಕ್ಕೆ ಬರಬೇಕು ಅನಿಸಿದ್ದೇಕೆ ?
ರಾಜಕಾರಣಕ್ಕೆ ಬರಬೇಕು ಎಂದು ಮೊದಲಿನಿಂದ ಪ್ಲಾನ್ ಏನು ಇರಲಿಲ್ಲ. ಸಣ್ಣ ವಯಸ್ಸಿನಿಂದಲೂ ರಾಜಕಾರಣ ನೋಡಿಕೊಂಡು ಬೆಳೆದಿದ್ದೇನೆ. ನನ್ನ ತಂದೆ ಮೊದಲಿನಿಂದ ರಾಜಕಾರಣದಲ್ಲಿ ಸಕ್ರಿಯವಾಗಿ ಇದ್ದವರು. ಜನರಿಗೆ ಸಹಾಯ ಮಾಡುವ ಗುಣ ಚಿಕ್ಕಂದಿನಿಂದಲೂ ನನ್ನಲ್ಲಿ ಬಂದಿದೆ. ಚುನಾವಣೆಗೆ ನಿಲ್ಲುವ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡು ಮತ್ತಷ್ಟು ಜನ ಸೇವೆ ಮಾಡಬಹುದಲ್ಲಾ ಎಂದು ಒಪ್ಪಿಕೊಂಡು ರಾಜಕೀಯಕ್ಕೆ ಬಂದೆ.

# ರಾಜಕಾರಣದ ರಾಡಿಯನ್ನು ಹೇಗೆ ನಿಭಾಯಿಸುತ್ತಿರಾ ?
ರಾಜಕಾರಣ ರಾಡಿ ಎಂದು ನನಗೆ ಅನಿಸುವುದಿಲ್ಲ. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಬಿಟ್ಟು ಯಾಕೆ ಬಂದ್ರಿ ಎಂದು ಎಲ್ಲರೂ ನನ್ನ ಕೇಳುತ್ತಾರೆ. ನನ್ನ ತಂದೆ ಮಾಡಿರುವ ಒಳ್ಳೆಯ ರಾಜಕಾರಣ ನನಗೆ ಪ್ರೇರಣೆ. ಹೊರಗೆ ರಾಜಕೀಯದ ಬಗ್ಗೆ ಬೇರೆಯದೆ ಅಭಿಪ್ರಾಯ ಇರಬಹುದು. ಆದರೆ ಎಲ್ಲವೂ ಕೆಟ್ಟದಾಗಿಲ್ಲ. ಹಿರಿಯರು ನೀಡುವ ಸಲಹೆ ಸೂಚನೆ ಪಾಲಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಒಳ್ಳೆಯ ರಾಜಕಾರಣಕ್ಕೆ ಮಾದರಿಯಾಗುತ್ತೇನೆ.

ನಿಮ್ಮನ್ನು ಚುನಾವಣೆಗೆ ನಿಲ್ಲಿಸಿ ತಂದೆ ಆಡಳಿತ ಮಾಡುತ್ತಾರೆ ಎಂಬ ಶಂಕೆ ಇದೆಯಲ್ಲ ?
ಈ ಮಾತು ಕೇಳಿದರೆ ಹೆಬ್ಬೆಟ್ಟು ರಾಮಕ್ಕ ಚಿತ್ರ ನೆನಪಾಗುತ್ತದೆ. ನಾನು ಹೆಬ್ಬೆಟ್ಟಲ್ಲ. ಓದು ಬರಹ ಗೊತ್ತಿದೆ. ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ನನಗೆ ನನ್ನ ತಂದೆ ಕಲಿಸಿದ್ದಾರೆ. ನನ್ನಲ್ಲೂ ಪ್ರಭುದ್ಧತೆ ಇದೆ. ತಂದೆ ಹಿಂದೆ ನಿಂತು ರಾಜಕಾರಣ ಮಾಡುತ್ತಾರೆ ಎಂಬುದೆಲ್ಲಾ ಸುಳ್ಳು, ಅದರ ಅಗತ್ಯವೂ ಇಲ್ಲ.

# ಮಹಿಳಾ ಸಬಲೀಕರಣದ ಬಗ್ಗೆ ನಿಮ್ಮ ನಿಲುವೇನು ?
ರಾಜಕಾರಣದಲ್ಲಿ ಶೇ.33ರಷ್ಟು ಮೀಸಲಾತಿ ಬೇಕು ಎಂಬ ಬೇಡಿಕೆಯಿದ್ದರೂ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಅಡುಗೆ ಮನೆಯಿಂದ ಹಿಡಿದು ಮಹಿಳೆಯರು ಎಲ್ಲವನ್ನು ನಿಭಾಯಿಸುತ್ತಾರೆ. ಮನೆಯನ್ನು ಆರ್ಥಿಕವಾಗಿ ಸರಿದೂಗಿಸುವುದರಲ್ಲಿ, ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಹೆಣ್ಣು ಎತ್ತಿದ ಕೈ ಎಂದು ಸಾಬೀತಾಗಿದೆ. ಆದರೆ ರಾಜಕಾರಣಕ್ಕೆ ಬಂದರೆ ಹೆಣ್ಣು ಮಕ್ಕಳು ನಿಭಾಯಿಸಲು ಆಗಲ್ಲ ಎಂಬ ಧೋರಣೆ ಇದೆ. ಅದು ಬದಲಾಗಬೇಕು. ವಿದ್ಯಾವಂತ ಹೆಣ್ಣು ಮಕ್ಕಳು ಹೆಚ್ಚಾಗಿ ರಾಜಕಾರಣಕ್ಕೆ ಬರಬೇಕು. ಮಹಿಳಾ ಸಬಲೀಕರಣವಾಗಬೇಕು, ಮಹಿಳಾ ಧ್ವನಿ ಹೆಚ್ಚಾಗಬೇಕು.

# ಜನ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು ?
ನನಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವು. ಶಿಕ್ಷಣದಿಂದಲೇ ನಾನು ನನ್ನ ಜೀವನದಲ್ಲಾದ ನೋವುಗಳನ್ನು ಮರೆಯಲು ಸಾಧ್ಯವಾಯಿತು. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗಬೇಕು. ಸಾವಿರಾರು ಶಾಲೆ ಇರುವುದಕ್ಕಿಂತ ಉತ್ತಮ ಶಿಕ್ಷಣ ನೀಡುವ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು.

# ಕ್ಷೇತ್ರವನ್ನು ಹೇಗೆ ಅರ್ಥೈಸಿಕೊಂಡಿದ್ದೀರಿ ?
ನಾನು ಇಲ್ಲೆ ಹುಟ್ಟಿ ಬೆಳೆದು, ವಾಸ ಮಾಡುತ್ತಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಭವಣೆ ತೀರಿಲ್ಲ. ಯಾವುದೇ ಪ್ರದೇಶಕ್ಕೆ ಹೋದರೂ ನೀರಿನ ಕೊರತೆ ಬಗ್ಗೆ ಹೇಳುತ್ತಾರೆ. ರಸ್ತೆಗಳು ಸರಿ ಇಲ್ಲ, ಒಳಚರಂಡಿ ಸಮಸ್ಯೆ ಇದೆ. ವಿದ್ಯುತ್ ಸಂಪರ್ಕ ಸೇರಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕ್ಷೇತ್ರದಲ್ಲಿರುವ ವೃಷಭಾವತಿ ನದಿ ನೀರನ್ನು ಹಿಂದೆಲ್ಲಾ ಕುಡಿಯಲು ಬಳಸುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು. ಈಗ ಅಲ್ಲಿನ ವಾಸನೆ ಸಹಿಸಲಾಗುತ್ತಿಲ್ಲ. ನಾವು ಮುಂದಿನ ಪೀಳಿಗೆಗೆ ಏನನ್ನು ಉಳಿಸಿಲ್ಲ. ಪರಿಸರ ಹಾಳು ಮಾಡಿದ್ದೇವೆ. ಅಫಿಷಿಯಲ್ ಸಮಸ್ಯೆಗಳು ಬೇರೆಯೇ ಇವೆ. ಇವುಗಳ ಬಗ್ಗೆ ಗಮನ ಹರಿಸುತ್ತೇನೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಯತ್ತ ಚಿಂತನೆ ನಡೆಸುತ್ತೇನೆ.

# ಪ್ರತಿಸ್ರ್ಪಯ ಬಗ್ಗೆ ಏನನ್ನು ಹೇಳುತ್ತೀರಾ ?
ಉಪಚುನಾವಣೆ ಯಾಕೆ ಬಂತು ಎಂದು ಜನರಿಗೆ ಚೆನ್ನಾಗಿ ಗೊತ್ತಿದೆ. ಜನರನ್ನು ಸುಲಭವಾಗಿ ಯಾಮಾರಿಸಬಹುದು ಎಂಬುದು ನಮ್ಮ ಭ್ರಮೆ. ಜನರಿಗೆ ಒಂದು ಚುನಾವಣೆ ಎಂದರೆ ಎಷ್ಟು ಹೊರೆ, ಆರ್ಥಿಕವಾಗಿ ಬೊಕ್ಕಸಕ್ಕೆ ಎಷ್ಟು ನಷ್ಟವಾಗುತ್ತದೆ, ನಮ್ಮ ತೆರಿಗೆಯ ದುಡ್ಡು ಹೇಗೆ ವ್ಯಯವಾಗುತ್ತದೆ ಎಂಬುದೆಲ್ಲಾ ತಿಳಿದಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತೇನೆ. ಪ್ರತಿಸ್ರ್ಪಗಳು ಯಾವ ತಂತ್ರವನ್ನಾದರೂ ಅನುಸರಿಸಲಿ ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

# ರಾಜಕಾರಣಕ್ಕೆ ಕಾಂಗ್ರೆಸ್ನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ?
ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ. ನನ್ನ ಜೀವನ ಸಿದ್ಧಾಂತವು ಅದೇ ಆಗಿದೆ. ನಮ್ಮ ತಂದೆ ಬೇಧಭಾವವನ್ನು ಕಲಿಸಿಲ್ಲ. ಜೊತೆಗೆ ಕಾಂಗ್ರೆಸ್ನಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳಿವೆ. ರಾಜೀವ್ ಗಾಂ ಬೆಂಗಳೂರಿಗೆ ಬಂದಾಗ ಅವರ ಜೊತೆ ನನ್ನ ತಂದೆ ಇರುವ ಒಂದು ಫೋಟೋ ನಮ್ಮ ಮನೆಯಲ್ಲಿದೆ. ಅದನ್ನು ನೋಡಿದರೆ ಒಂದು ರೀತಿ ಖುಷಿಯಾಗುತ್ತದೆ. ಕಾಂಗ್ರೆಸ್ನಲ್ಲಿ ಇಂದಿರಾಗಾಂ, ರಾಜೀವ್ಗಾಂ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ನನಗಿಷ್ಟ.

# ನಿಮ್ಮ ತಂದೆ ಯಾವ ಪಕ್ಷದಲ್ಲಿದ್ದಾರೆ ?
ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದು ನನ್ನ ತಂದೆ ಅಲ್ಲ, ಚುನಾವಣೆ ಕಣದಲ್ಲಿರುವುದು ನಾನು. ನಾನು ಯಾವ ಪಕ್ಷದಲ್ಲೂ ಇರಲಿಲ್ಲ. ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳಲು ನನ್ನ ತಂದೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಇನ್ನೂ ಅವರು ಯಾವ ಪಕ್ಷದಲ್ಲಿದ್ದರು ? ಏನು ಮಾಡಿದ್ದರು ? ಎನ್ನುವ ಬಗ್ಗೆ ಖುದ್ದು ಅವರೇ ಉತ್ತರ ಕೊಡುವುದು ಸೂಕ್ತ. ಅವರ ಪರವಾಗಿ ನಾನು ಮಾತನಾಡುವುದು ಸರಿ ಅಲ್ಲ.

# ಜನರಿಂದ ನಿಮಗೆ ಸಿಕ್ಕಿರುವ ಪ್ರತಿಕ್ರಿಯೆ ಹೇಗಿದೆ ?
ಉಪಚುನಾವಣೆ ಎದುರಿಸಲು ಕಾಂಗ್ರೆಸ್ನಲ್ಲಿ ಭಾರೀ ಒಗ್ಗಟ್ಟು ಕಂಡು ಬಂದಿದೆ. ಎಲ್ಲಾ ನಾಯಕರು ಒಟ್ಟಾಗಿ ನನ್ನ ಬೆನ್ನಿಗೆ ನಿಂತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಮನೆ ಮಗಳಂತೆ ಬರ ಮಾಡಿಕೊಳ್ಳುತ್ತಿದ್ದಾರೆ. ನನಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ನೋಡಿದರೆ ಆತ್ಮವಿಶ್ವಾಸ ಹೆಚ್ಚುತ್ತಿದೆ. ಕಾಂಗ್ರೆಸ್ನವರಷ್ಟೆ ಅಲ್ಲ ಬೇರೆ ಪಕ್ಷಗಳ ಬೆಂಬಲಿಗರು ಕೂಡ ನೀವು ಗೆಲ್ಲಬೇಕು ಎಂದು ಹೇಳುತ್ತಿದ್ದಾರೆ.

# ನಿಮ್ಮ ಮೇಲೆ ನಡೆಯುವ ವೈಯಕ್ತಿಕ ದಾಳಿಯನ್ನು ಹೇಗೆ ಎದುರಿಸುತ್ತೀರಾ ?
ಚುನಾವಣೆಗೆ ನಿಲ್ಲುತ್ತಿದ್ದಂತೆ ಕೇಳಿ ಬರುತ್ತಿರುವ ಅದೃಷ್ಟ-ದುರಾಷ್ಟದ ನಿಂದನೆಗಳನ್ನು ನಾನು 2015ರಿಂದಲೂ ಕೇಳಿಕೊಂಡು ಬಂದಿದ್ದೇನೆ. ಈ ಮಾತುಗಳು ನನಗೆ ಹೊಸದಲ್ಲ. ಸಾಕಷ್ಟು ಆಪಾದನೆ, ನೋವುಗಳನ್ನು ನುಂಗಿಕೊಂಡಿದ್ದೇನೆ. ಮೌನವಾಗಿ ನೋವು ಅನುಭವಿಸುವುದು ಅಭ್ಯಾಸವಾಗಿ ಹೋಗಿದೆ. ಆ ನಿಂದನೆ, ನೋವುಗಳನ್ನು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿವೆ. ಎಲ್ಲವನ್ನು ಸಹಿಸುವ ಚೈತನ್ಯವನ್ನು ದೇವರು ಕೊಟ್ಟಿದ್ದಾರೆ. ಮುಂದೆ ಇನ್ನಷ್ಟು ನಿಂದನೆಗಳು ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ, ಸಹಿಸಿಕೊಳ್ಳುತ್ತೇನೆ.

# ಈ ರೀತಿ ನಿಮ್ಮನ್ನು ಗುರಿ ಮಾಡಲು ಕಾರಣ ಏನು ?
ಅದು ನನಗೆ ಗೊತ್ತಿಲ್ಲ, ನಾನು ಏನು ತಪ್ಪು ಮಾಡಿಲ್ಲ, ಈವರೆಗೂ ಆಗಿರುವ ಎಲ್ಲಾ ಅನ್ಯಾಯವನ್ನು ಮೌನವಾಗಿದ್ದು ಸಹಿಸಿಕೊಂಡಿದ್ದೇನೆ. ನೋವು ಕೊಟ್ಟರೆಂದು ಯಾರ ವಿರುದ್ಧವೂ ಸಿಟ್ಟು ಮಾಡಿಕೊಂಡಿಲ್ಲ. ಅಂತಹ ಅಭ್ಯಾಸಗಳು ನನ್ನವಲ್ಲ. ಈ ತಾಳ್ಮೆ, ಗಟ್ಟಿತನವೇ ನನ್ನನ್ನು ಇಲ್ಲಿವರೆಗೂ ತಂದು ನಿಲ್ಲಿಸಿದೆ ಎನಿಸುತ್ತಿದೆ.

# ಪದವಿ ಪಡೆದ ಬಗ್ಗೆ ಟ್ರೋಲ್ ಆಗಿದ್ದೇಕೆ ?
ಅದೊಂದು ಟೈಪಿಂಗ್ ಮಿಸ್ಟೇಕ್, ಅದು ಕಣ್ಣಿಗೆ ಬಿದ್ದು ಸರಿ ಪಡಿಸಿಕೊಳ್ಳುವ ವೇಳೆಗೆ ಸೋಷಿಯಲ್ ಮಿಡಿಯಾದಲ್ಲಿ ಅನಗತ್ಯವಾಗಿ ನೆಗೆಟಿವ್ ಆಗಿ ಟ್ರೋಲ್ ಮಾಡಲಾಯಿತು.

# ನಿಮ್ಮ ಅತ್ತೆಯವರ ಹೇಳಿಕೆಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ?
ಅವರು ದೊಡ್ಡವರು, ಅವರ ಮಾತುಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ, ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಯಾರನ್ನಾದರೂ ಕಳೆದುಕೊಂಡಾಗ ಒಬ್ಬರ ನೋವು ಹೆಚ್ಚು, ಒಬ್ಬರ ನೋವು ಕಡಿಮೆ ಎಂದು ಹೇಗೆ ಅಳತೆ ಹಾಕುತ್ತಾರೆ. ಆ ರೀತಿ ನಿರ್ಧರಿಸಲು ಯಾವುದಾದರೂ ತಕ್ಕಡಿ ಇದೆಯಾ. ಕೌಟುಂಬಿಕ ವಿಷಯಗಳೆಂದು ಕೆಲವನ್ನು ನಾವು ಹೊರಗೆ ಚರ್ಚೆ ಮಾಡುವುದಿಲ್ಲ. ನನ್ನನ್ನು ಹತ್ತಿರದಿಂದ ನೋಡಿವದರಿಗೆ ನಾನೇನು ಎಂದು ಗೊತ್ತಿದೆ. ಸತ್ಯವನ್ನು ತುಂಬಾ ದಿನ ಮುಚ್ಚಿಡಲಾಗಲ್ಲ. ಅಷ್ಟು ಮಾತ್ರ ಹೇಳುತ್ತೇನೆ.

# ಮರುಮದುವೆ ಬಗ್ಗೆ ಆಲೋಚನೆ ಬರಲಿಲ್ಲವೇ ?
ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡೆ ನಿಜ. ಆದರೆ ಕಳೆದುಕೊಂಡ ಕಾರಣಗಳಿವೆಯಲ್ಲಾ ಅವು ಎಲ್ಲಾ ಭರವಸೆಗಳನ್ನು ಕುಗ್ಗಿಸಿ ಬಿಟ್ಟವು. ಮದುವೆಯೇ ಅಂತಿಮ ಅಲ್ಲ ಎಂದು ಆಗಲೇ ನಿರ್ಧರಿಸಿ ಬಿಟ್ಟೆ. ನಾನು ನನ್ನ ಸ್ವಂತ ಬದುಕು ರೂಢಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ಬೇರೆಯವರಿಗೆ ಹೊರೆಯಾಗಬಾರದು.

# ಡಿ.ಕೆ.ರವಿ ಸಾವಿನ ತನಿಖೆ ಬಗ್ಗೆ ನಿಮ್ಮ ನಿಲುವು ?
ದೇಶದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾದ ಸಿಬಿಐ ಎಲ್ಲಾ ಕೋನಗಳಿಂದಲೂ ವಿಚಾರಣೆ ನಡೆಸಿದೆ, ನಾನು ತನಿಖೆಯ ಒಂದು ಭಾಗವಾಗಿದ್ದೆ. ನಾವು ನಿರೀಕ್ಷೆ ಮಾಡದ, ಊಹಿಸಲು ಸಾಧ್ಯವಿಲ್ಲದ ದೃಷ್ಟಿಕೋನಗಳಿಂದೆಲ್ಲಾ ತನಿಖೆ ನಡೆದಿದೆ. ಅದರ ವರದಿ ಜನರ ಮುಂದಿದೆ. ಸಾವಿನ ಕಾರಣಗಳು ನಿಶ್ಚಳವಾಗಿದೆ. ನನ್ನ ಜೀವನದಲ್ಲಿ ಆಗಿದ್ದನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಇಚ್ಚೆ ಪಡುವುದಿಲ್ಲ. ಆ ವಿಷಯವನ್ನು ಯಾರೂ ರಾಜಕೀಯಕ್ಕೆ ಎಳೆದು ತರಬಾರದು ಎಂದಷ್ಟೆ ಮನವಿ ಮಾಡುತ್ತೇನೆ.

Facebook Comments

Sri Raghav

Admin