“ಸೋಲಿನ ಭಯದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ಸೋಲಿನ ಭಯದಿಂದ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ತೇಜೋವಧೆ ಮಾಡಲಾಗುತ್ತಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಕೃಷ್ಣಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ತಮ್ಮ ವಿರುದ್ಧ ತೇಜೋವಧೆ ಮಾಡಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ನ್ಯಾಯ ಒದಗಿಸುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಜೆಡಿಎಸ್‍ನ ಸಾಮಾನ್ಯ ಕಾರ್ಯಕರ್ತರಾಗಿದ್ದ ತಮ್ಮನ್ನು ಗುರುತಿಸಿ ಟಿಕೆಟ್ ನೀಡಿರುವುದೇ ತಪ್ಪೇ? ಜೆಡಿಎಸ್‍ನಲ್ಲಿ ಯಾರೂ ಮಾರಾಟವಾಗಿಲ್ಲ ಎಂದರು.

ಹನುಮಂತರಾಯಪ್ಪ ಅವರು ನಗರಸಭಾಧ್ಯಕ್ಷರಾಗಿದ್ದಾಗ ಏನು ಕೊಡುಗೆ ನೀಡಿದ್ದಾರೆ. ಹಣಬಲವಿಲ್ಲದೆ ಚುನಾವಣೆ ಎದುರಿಸಲು ರಾಷ್ಟ್ರೀಯ ಪಕ್ಷಗಳು ಸಿದ್ಧವಿವೆಯೇ ಎಂದು ಪ್ರಶ್ನಿಸಿದರು. ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಕಾರ್ಡ್ ಬಳಕೆ ಮಾಡಲಾಗುತ್ತಿದೆ.

ಇದರ ವಿರುದ್ಧ ನಾಳೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದರು. ಬಿಜೆಪಿ ಅಭ್ಯರ್ಥಿಯನ್ನು ಬೆಳೆಸಿದ್ದೇ ಕಾಂಗ್ರೆಸ್‍ನವರು. ಈಗ ಅವರಿಗೆ ಜ್ಞಾನೋದಯವಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚನೆಗೆ ಅವಕಾಶವಿಲ್ಲ ದಿದ್ದರೂ ಒಕ್ಕಲಿಗರು ಒಂದಾಗಬೇಕೆಂಬ ಭಾವನಾತ್ಮಕ ವಿಚಾರ ಬಳಸಲಾಗುತ್ತಿದೆ ಎಂದು ಹೇಳಿದರು.

ಹನುಮಂತರಾಯಪ್ಪ ಅವರಿಗೆ ಅಕಾರದ ದಾಹ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್‍ಅನ್ನು ನಗಣ್ಯವೆಂದು ಭಾವಿಸಿದ್ದವು. ನಾವು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆ ಎದುರಿಸುತ್ತಿದ್ದೇವೆ. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು ನಾಳೆ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳು ಜಾತಿ ರಾಜಕೀಯ ಬಿಟ್ಟು ತಮ್ಮ ತಮ್ಮ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮದ ಆಧಾರದ ಮೇಲೆ ಮತ ಕೇಳಲಿ. ಆರ್‍ಆರ್ ನಗರದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಹಣ ಹಂಚಿಕೆ ನಡೆದಿದೆ ಎಂದು ಆರೋಪಿಸಿದ ಅವರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಮಾತನಾಡಿ, ಆರ್‍ಆರ್ ನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲು ಬಿಜೆಪಿ ಅಭ್ಯರ್ಥಿಯೇ ಕಾರಣ. ಜೆಡಿಎಸ್‍ನ ಭಯ ರಾಷ್ಟ್ರೀಯ ಪಕ್ಷಗಳಿಗೆ ಕಾಡುತ್ತಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಕೃತ ಅಭ್ಯರ್ಥಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಆಯೋಗ ಗಮನ ಹರಿಸಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗರಾಜ್, ನರಸಿಂಹಮೂರ್ತಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin