LIVE : ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.3- ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಆರ್‍ಆರ್‍ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾನ ಶಾಂತಿಯುತವಾಗಿತ್ತು ಮತ್ತು ಬಿರುಸಿನಿಂದ ಕೂಡಿತ್ತು. ಕೊರೊನಾ ಸೋಂಕಿನ ನಡುವೆ ನಡೆದ ಮೊದಲ ಚುನಾವಣೆ ಇದಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಎರಡೂ ಕ್ಷೇತ್ರಗಳಲ್ಲಿ ಂಡುಬಂತು.

ಬೆಳಗ್ಗೆ 11 ಗಂಟೆ ವೇಳೆಗೆ ಶಿರಾದಲ್ಲಿ ಶೇ.23ರಷ್ಟು ಹಾಗೂ ಆರ್‍ಆರ್‍ನಗರ ಶೇ.14ರಷ್ಟು ಮತದಾನವಾಗಿತ್ತು. ಮತಗಟ್ಟೆಗಳ ಬಳಿ ಮತಪ್ರಚಾರ, ಮತದಾರರನ್ನು ಸೆಳೆಯುವ ಯತ್ನ, ಕೇಸರಿ ಬಣ್ಣದ ಮಾಸ್ಕ್‍ಗಳನ್ನು ಚುನಾವಣಾ ಸಿಬ್ಬಂದಿ ಧರಿಸಿದ್ದಾರೆ ಎಂಬ ಆರೋಪ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಅಲ್ಲಲ್ಲಿ ನಡೆದ ಮಾತಿನ ಚಕಮಕಿ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.  ಎಲ್ಲಾ ಮತಗಟ್ಟೆಗಳಲ್ಲಿ ಕೊರೊನಾ ಸೋಂಕಿನ ನಡುವೆ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಮತದಾನಕ್ಕೆ ಬರುವ ಪ್ರತಿ ಮತದಾರರಿಗೂ ಸ್ಯಾನಿಟೈಸರ್, ಗ್ಲೌಸ್‍ಗಳನ್ನು ನೀಡಲಾಗುತ್ತಿತ್ತು.

ಆರ್‍ಆರ್‍ನಗರ, ಶಿರಾ ಕ್ಷೇತ್ರದ 1008 ಮತಗಟ್ಟೆಗಳಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ಆಗಮಿಸಿದ ಎಲ್ಲರಿಗೂ ಸ್ಯಾನಿಟೈಸರ್ ನೀಡಿ ಗ್ಲೌಸ್‍ಗಳನ್ನು ನೀಡುತ್ತಿದ್ದರು. ಮತದಾನದ ನಂತರ ಗೌಸ್ಲ್‍ಗಳನ್ನು ನಿಗದಿತ ಸ್ಥಳಗಳಲ್ಲಿ ಹಾಕಿ ತೆರಳುವಂತೆ ಸೂಚಿಸುತ್ತಿದ್ದರು. ಸಾಮಾಜಿಕ ಅಂತರ, ಸುರಕ್ಷಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರಿಂದ ಮತದಾನಕ್ಕೆ ಹೆಚ್ಚಾಗಿ ಜನ ಆಗಮಿಸುತ್ತಿದುದು ಕಂಡುಬಂತು.

ಬೆಳಗ್ಗೆ ಮಂದಗತಿಯಲ್ಲಿ ಸಾಗುತ್ತಿದ್ದ ಮತದಾನ ಮಧ್ಯಾಹ್ನದ ನಂತರ ಏರುಗತಿಯಲ್ಲಿ ಸಾಗಿತು. ಆರ್‍ಆರ್‍ನಗರ ವಿಧಾನಸಭಾ ಕ್ಷೇತ್ರ, ನಾಗರಭಾವಿ ಮತಗಟ್ಟೆ ಸಂಖ್ಯೆ 290ರ ಬಳಿ ಅರೆಸೇನಾ ಪಡೆ ಸಿಬ್ಬಂದಿಗೆ ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.

ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವವರ ಮೇಲೆ ಬಿಜೆಪಿ ಪ್ರಭಾವ ಬೀರುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೇಸರಿ ಬಣ್ಣದ ಮಾಸ್ಕ್ ತೆಗೆಸಿ ನೀಲಿಬಣ್ಣದ ಸರ್ಜಿಕಲ್ ಮಾಸ್ಕ್ ನೀಡಲಾಯಿತು.

ಜಾಲಹಳ್ಳಿ ಕ್ಲಾರಂಜಾ ಶಾಲೆ ಬಳಿ ಬೆಂಚ್ ಹಾಕುವ ವಿಚಾರಕ್ಕೂ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಪೆಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಇವಿಷ್ಟು ಹೊರತುಪಡಿಸಿ ಬೇರೆ ಯಾವ ಅಹಿತಕರ ಘಟನೆಗಳು ನಡೆದಿಲ್ಲ. ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಪತ್ನಿ ನಿರ್ಮಲ ಅವರೊಂದಿಗೆ ಶಿರಾ ಪಟ್ಟಣದ ರಾಘವೇಂದ್ರ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎಂ.ರಾಜೇಶ್‍ಗೌಡ, ತಾಲ್ಲೂಕಿನ ಆಂಧ್ರ ಗಡಿಯಲ್ಲಿರುವ ಚಿರತೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ರಂಗನಾಥ ಕಾಲೇಜಿನಲ್ಲಿ ತಮ್ಮ ಮತ ಚಲಾಯಿಸಿದರು. ಆರ್‍ಆರ್‍ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರ ಮತ ತಮ್ಮ ಕ್ಷೇತ್ರದಲ್ಲಿ ಇಲ್ಲ. ಅವರು ಇಂದು ಬೆಳಗ್ಗೆ ಮಲ್ಲೇಶ್ವರದ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಅವರು ಮತದಾನ ಮಾಡುವ ಬದಲು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಜ್ಞಾನಭಾರತಿ ವಾರ್ಡ್‍ನ ಮಲ್ಲತಹಳ್ಳಿ ಕನ್ಯಾಕುಮಾರಿ ಪ್ರೌಢಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 304ರಲ್ಲಿ ತಮ್ಮ ತಂದೆತಾಯಿಗಳೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ತಮ್ಮ ಬೆಂಬಲಿಗರೊಂದಿಗೆ ಅಗಮಿಸಿ ಜ್ಞಾನಭಾರತಿ ವಾರ್ಡ್‍ನ ಉಲ್ಲಾಳ್ ಮುಖ್ಯರಸ್ತೆ ಎಚ್‍ಎಂಆರ್ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದಿಂದ ಯಾರೂ ವಂಚಿತರಾಗಬಾರದೆಂಬ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿ ಇರುವವರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಿತು. ಆ್ಯಂಬುಲೆನ್ಸ್‍ನಲ್ಲಿ ಬಂದು ಮತದಾನ ಮಾಡುವ ಅವಕಾಶ ಒದಗಿಸಿದ ಹಿನ್ನೆಲೆಯಲ್ಲಿ ಅವರೆಲ್ಲರೂ ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದು.

ಈ ಚುನಾವಣೆ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲುವಿಗಾಗಿ ಕಳೆದ 20 ದಿನಗಳಿಂದ ಅಬ್ಬರದ ಪ್ರಚಾರ ನಡೆಸಲಾಗಿತ್ತು.  ಯಾರ ಭವಿಷ್ಯ ಏನೆಂಬುದರ ಬಗ್ಗೆ ಮತದಾರ ಇಂದು ಮತ ಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದು, ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

# ಇಲ್ಲಿದೆ ಹೈಲೈಟ್ಸ್ :

# ಶಿರಾದಲ್ಲಿ ಮತ ಚಲಾಯಿಸಿದ ಅಭ್ಯರ್ಥಿಗಳು ತುಮಕೂರು, ನ.3- ಶಿರಾ ತಾಲ್ಲೂಕಿನ ಆಂಧ್ರ ಗಡಿಯಲ್ಲಿರುವ ಚಿರತೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಎಂ.ರಾಜೇಶ್‍ಗೌಡ ತಮ್ಮ ಮತ ಚಲಾಯಿಸಿದರು. ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತದಾನ ಮಾಡಿದ ರಾಜೇಶ್‍ಗೌಡ ಅವರು ಮತ ಕೇಂದ್ರದಿಂದ ಉತ್ಸಾಹದಿಂದಲೇ ಗೆಲುವಿನ ಚಿಹ್ನೆ ತೋರಿಸುತ್ತಾ ಹೊರ ಬಂದರು.

ನನಗೆ ಶಿರಾ ಮತದಾರರು ವಿಜಯ ಮಾಲೆ ಹಾಕಲಿದ್ದಾರೆ. ನನ್ನ ಗೆಲುವಿಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ , ವಿಜಯೇಂದ್ರ , ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡ ಹಾಗೂ ಸಚಿವ ಸಂಪುಟದ ಸದಸ್ಯರುಗಳಿಗೆ ನಾನು ಆಬಾರಿ ಎಂದರು. ಅಕ್ರಮ ಚುನಾವಣೆ ನಡೆಸಲಾಗುತ್ತಿದೆ ಎಂದು ನನ್ನ ವಿರುದ್ಧ ಕೆಲವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಟಿಬಿಜೆ ಕೆಂಡಾಮಂಡಲ: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರರ ಅವರು ತಮ್ಮ ಪತ್ನಿ ನಿರ್ಮಲಾ ಜಯಚಂದ್ರ ಅವರೊಂದಿಗೆ ಶಿರಾ ಪಟ್ಟಣದ ರಾಘವೇಂದ್ರ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನಗೆ 10 ನೆ ಚುನಾವಣೆ. ಆದರೆ ಈ ಬಾರಿಯಷ್ಟು ಭ್ರಷ್ಟಾಚಾರ ಚುನಾವಣೆ ನಾನೆಂದೂ ನೋಡಿಲ್ಲ. ಅಕಾರಿಗಳು ಒಂದು ಪಕ್ಷದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಕ್ರಮ ಕುರಿತಂತೆ ಚುನಾವಣಾಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟಿಬಿಜೆ ಕಿಡಿಕಾರಿದರು.

ನನ್ನ ಪತಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಈ ಬಾರಿ ಶಿರಾ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ ಎಂದು ಜಯಚಂದ್ರ ಪತ್ನಿ ನಿರ್ಮಲಾ ಅಭಿಪ್ರಾಯಪಟ್ಟರು.ಅನುಕಂಪ ವರದಾನವಾಗಲಿದೆ : ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ ಕುಟುಂಬ ವರ್ಗದವರೊಂದಿಗೆ ರಂಗನಾಥ ಕಾಲೇಜಿಗೆ ಆಗಮಿಸಿ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ನನ್ನ ಪತಿಯ ಸಾವಿನ ಅನುಕಂಪ ಹಾಗೂ ಪಕ್ಷದ ವರಿಷ್ಠರ ಪರಿಶ್ರಮದಿಂದ ಶಿರಾ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಗೆಲುವಿಗಾಗಿ ಶ್ರಮಿಸುತ್ತಿರುವ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಮತ್ತಿತರರಿಗೆ ನಾನು ಆಬಾರಿಯಾಗಿದ್ದೇನೆ ಎಂದರು. ತಡವಾಗಿ ಮತದಾನ: 330 ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ಮತದಾನ ಆರಂಭವಾದರೂ ಕೆಲ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷದಿಂದ 30 ನಿಮಿಷಗಳ ಕಾಲ ತಡವಾಗಿ ಮತದಾನವಾಯಿತು.80 ವರ್ಷ ಮೇಲ್ಪಟ್ಟ 2674 ಮಂದಿ , 2042 ವಿಶೇಷಚೇತನರು, 105 ಕೊರೊನಾ ಸೋಂಕಿತರು ಸೇರಿದಂತೆ 4821 ಮತದಾರರು ಅಂಚೆ ಮತದಾನ ಮಾಡಿದ್ದಾರೆ.

# ಭಾರೀ ಭದ್ರತೆ :
ಉಪ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಮತದಾರರು ನಿರ್ಭೀತಿಯಿಂದ ಮತ ಕೇಂದ್ರಗಳಿಗೆ ಆಗಮಿಸಿ ಮತ ಚಲಾಯಿಸುವಂತೆ ಎಸ್ಪಿ ಕೋನ ವಂಶಿಕೃಷ್ಣ ಮನವಿ ಮಾಡಿಕೊಂಡರು.

# ಬೆಳಿಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಕೋವಿಡ್ ಕಾಲದಲ್ಲಿ ನಡೆಯುತ್ತಿರುವ ಚುನಾವಣೆಯಾದ ಕಾರಣ ಎಲ್ಲಾ ಸೂಕ್ತ ಮುಂಜಾಗೃತೆ ವಹಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಿರಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾನಕ್ಕೆ 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 801 ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 678 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ 1,458 ಇವಿಎಂ-ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತದೆ. 9,515 ಚುನಾವಣ ಸಿಬಂದಿಯನ್ನು ನಿಯೋಜಿಸಲಾಗಿದೆ.

ರಾಜರಾಜೇಶ್ವರಿ ನಗರದ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಜ್ಞಾನ ಭಾರತಿ ವಾರ್ಡ್ ನ ಎಚ್ ಎಂ ಆರ್ ಶಾಲೆ ಮತಗಟ್ಟೆ ಯಲ್ಲಿ ವಿ.ಕೃಷ್ಣಮೂರ್ತಿ ಮತದಾನ ಮಾಡಿದರು. ಈಗಾಗಲೇ ಅಭ್ಯರ್ಥಿಗಳು ಮತ್ತು ಸೆಲೆಬ್ರೆಟಿಗಳು ಸೇರಿದಂತೆ ಹಲವಾರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

# ರಾಜರಾಜೇಶ್ವರಿ ನಗರ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ರಾಜರಾಜೇಶ್ವರಿ ನಗರದ ಜ್ವಾನಭಾರತಿ ವಾರ್ಡ್ ನ ಕನ್ಯಾಕುಮಾರಿ ಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇನ್ನು ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಮತದಾನ ಪ್ರತಿಯೊಬ್ಬರ ಹಕ್ಕು, ಎಲ್ಲರೂ ಬಂದು ಮತ ಚಲಾಯಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತದಾರರಲ್ಲಿ ಮನವಿ ಮಾಡಿದ್ದಾರೆ.

# ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಿಎಂ ಮನವಿ :
ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಉಪಚುನಾವಣೆ ಮತದಾನ ಚಾಲ್ತಿಯಲ್ಲಿರುವಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುರಕ್ಷತೆ ನಿಯಮ ಪಾಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಎಲ್ಲ ಸುರಕ್ಷತೆ ನಿಯಮಗಳನ್ನು ಪಾಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸುವಂತೆ ಟ್ವಿಟರ್‍ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇಂದು ರಾಜ್ಯದಲ್ಲಿ ನಡೆಯುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು, ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಕೋರುತ್ತೇನೆಂದು ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

# ರಾಜ್ಯದಲ್ಲಿ ಕೋವಿಡ್ -19 ಮಹಾಮಾರಿ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕಾಗಿ ಚುನಾವಣಾ ಆಯೋಗ ಹಿಂದೆಂಗಿಂತಲೂ ಅಭೂತಪೂರ್ವ ಬಿಗಿಭದ್ರತೆ ಕೈಗೊಂಡಿದೆ. ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ನ.10ರಂದು ಮತ ಎಣಿಕೆ ನಡೆದು, ಅಂದೇ ಫಲಿತಾಂಶ ಹೊರಬೀಳಲಿದೆ.

# ಕೋವಿಡ್ ಹಿನ್ನೆಲೆಯಲ್ಲಿ ಆಯೋಗ ಇದೇ ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕೀನಿಂಗ್, ಕೋವಿಡ್ ಸೋಂಕಿತರಿಗೆ ಕೊನೆ ಕ್ಷಣದಲ್ಲಿ ಮತದಾನಕ್ಕೆ ಅನುವು ಮಾಡಿಕೊಟ್ಟಿದೆ. ಎರಡು ಕ್ಷೇತ್ರಗಳಲ್ಲಿ ಒಟ್ಟು 1,008 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 678 ಮತಗಟ್ಟೆ ಹಾಗೂ ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆ ಸೇರಿ ಒಟ್ಟು 1,008 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಎರಡೂ ಕ್ಷೇತ್ರಗಳಲ್ಲೂ ತಲಾ ಮೂರು ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

# ಆರ್.ಆರ್.ನಗರ ಕ್ಷೇತ್ರದಲ್ಲಿ 4203 ಮತದಾನ ಸಿಬ್ಬಂದಿ, 156 ಎನ್ಫೋಸ್ರ್ಮೆಂಟ್ ಸಿಬ್ಬಂದಿ, 115 ಮೈಕ್ರೋ ಸಿಬ್ಬಂದಿ, 2623 ರಾಜ್ಯ ಪೊಲೀಸರು, 300 ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ, 381 ಬೂತ್ ಮಟ್ಟದ ಅಧಿಕಾರಿಗಳು, 146 ಚಾಲಕರು, ನೆರವಿಗಾಗಿ 5 ಸಿಬ್ಬಂದಿ, 1586 ಇತರೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

# ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸರು ಅಗತ್ಯವಾದ ಕ್ರಮ ಕೈಗೊಂಡಿದ್ದಾರೆ. 2 ಡಿವೈಎಸ್ಪಿ, 5 ಮಂದಿ ಇನ್‍ಸ್ಪೆಕ್ಟರ್, 21 ಪಿಎಸ್‍ಐ, 19 ಎಎಸ್‍ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಕೇಂದ್ರದ 3 ಭದ್ರತಾ ಸಿಬ್ಬಂದಿಗಳ ಕಂಪನಿಗಳು ಭದ್ರತೆಗೆ ಆಗಮಿಸಿದ್ದು, ಹೋಬಳಿವಾರು 5 ಇನ್‍ಸ್ಪೆಕ್ಟರ್‍ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

# ಚುನಾವಣಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳಿದ್ದು, ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಸೇರಿದಂತೆ 16 ಮಂದಿ ಅಖಾಡದಲ್ಲಿದ್ದಾರೆ. ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ನೋಂದಾಯಿತ ರಾಜಕೀಯ ಪಕ್ಷದಿಂದ 4 ಮತ್ತು 9 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.

# ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಸೇರಿದಂತೆ 15 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಪೈಕಿ ಬಿಜೆಪಿ -1, ಕಾಂಗ್ರೆಸ್-1, ಜೆಡಿಎಸ್-1, ಸಿಪಿಐ-1, ನೋಂದಾಯಿತ ರಾಜಕೀಯ ಪಕ್ಷದಿಂದ 3 ಮತ್ತು 8 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.

# ಮತದಾನಕ್ಕೆ ಬೇಕಾದ ದಾಖಲೆಗಳು:
ಮತ ಚಲಾಯಿಸಲು ಆಧಾರ್ ಕಾರ್ಡ್, ನರೇಗಾ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾನ್ಕಾರ್ಡ್, ಪಾಸ್ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾಗಿದ್ದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿ ಪ್ರಮಾಣ ಪತ್ರ, ವಿಕಲಚೇತನ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತದಾನ ಚಲಾಯಿಸಬಹುದಾಗಿದೆ.

# ಇವಿಎಂ-ವಿವಿಪ್ಯಾಟ್:
ಆರ್.ಆರ್.ನಗರ ಕ್ಷೇತ್ರದಲ್ಲಿ ಈಗಾಗಲೇ 3020 ಬ್ಯಾಲೆಟ್ ಯೂನಿಟ್, 1458 ಕಂಟ್ರೋಲ್ ಯೂನಿಟ್ ಮತ್ತು 1450 ವಿವಿಪ್ಯಾಟ್‍ಗಳಿವೆ. ಹೆಚ್ಚುವರಿಯಾಗಿ 1888 ಬ್ಯಾಲೆಟ್ ಯೂನಿಟ್, 1424 ಕಂಟ್ರೋಲ್ ಯೂನಿಟ್ ಮತ್ತು 1431 ವಿವಿಪ್ಯಾಟ್‍ಳನ್ನು ವ್ಯವಸ್ಥೆ ಮಾಡಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 801 ಬ್ಯಾಲೆಟ್ ಯೂನಿಟ್, 801 ಕಂಟ್ರೋಲ್ ಯೂನಿಟ್ ಮತ್ತು 801 ವಿವಿ ಪ್ಯಾಟ್‍ಗಳಿವೆ. ಹೆಚ್ಚುವರಿಯಾಗಿ 798 ಬ್ಯಾಲೆಟ್ ಯೂನಿಟ್, 770 ಕಂಟ್ರೋಲ್ ಯೂನಿಟ್, 762 ವಿವಿಪ್ಯಾಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.

Facebook Comments

Sri Raghav

Admin