ಏರುತ್ತಿರುವ ಐಪಿಎಲ್ ಕಾವು : ಇಂದು RCBಗೆ SRH ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಸೆ.21- ಐಪಿಎಲ್ ಕಾವು ರಂಗೇರಿದ್ದು ಡೆಲ್ಲಿ ಹಾಗೂ ಪಂಜಾಬ್ ವಿರುದ್ಧ ನಡೆದ ಪಂದ್ಯ ಸೂಪರ್ ಓವರ್‍ನಲ್ಲಿ ಮುಗಿದ ನಂತರ ಹೊಡಿ ಬಡಿ ಆಟಕ್ಕೆ ಮತ್ತಷ್ಟು ರಂಗು ಬಂದಿದೆ ಇಂದು 2016ರ ಚಾಂಪಿಯನ್ ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ರನ್ನರ್‍ಅಪ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧ ಹಣಾಹಣಿ ನಡೆಯುತ್ತಿದ್ದು ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸಿದೆ.

2019ರಲ್ಲಿ ಆರ್‍ಸಿಬಿ ಪ್ಲೇಆಫ್‍ಗೇರಲು ಪ್ರಮುಖ ಪಂದ್ಯದಲ್ಲೇ ಕೇನ್‍ವಿಲಿಯಮ್ಸ್ ನಾಯಕತ್ವದ ಎಸ್‍ಆರ್‍ಎಚ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರ ನಡೆದಿದ್ದ ವಿರಾಟ್ ಕೊಹ್ಲಿ ಪಡೆ ಐಪಿಎಲ್ 13ರ ಆರಂಭಿಕ ಪಂದ್ಯದಲ್ಲೇ ರೋಚಕ ಗೆಲುವು ಸಾಧಿಸುವ ಮೂಲಕ ಕಪ್ ಗೆಲ್ಲುವ ಹುಮ್ಮಸ್ಸನ್ನು ಹೆಚ್ಚಿಸಿಕೊಳ್ಳಲು ವಿರಾಟ್ ಪಡೆ ರಣತಂತ್ರ ರೂಪಿಸಿದ್ದರೆ, ಡೇವಿಡ್ ವಾರ್ನರ್ ಪಡೆ ಕೂಡ ಗೆಲುವಿನೊಂದಿಗೆ ಶುಭಾರಂಭ ಮಾಡಲು ಹಾತೊರೆಯುತ್ತಿದೆ.

ಬ್ಯಾಟ್ಸ್‍ಮನ್‍ಗಳ ಅಬ್ಬರ: ಬ್ಯಾಟಿಂಗ್‍ಗೆ ನೆರವು ನೀಡುವ ಅಬುದಾಬಿ ಪಿಚ್‍ನಲ್ಲಿ ರನ್ ಹೊಳೆ ಹರಿಸುವಂತಹ ಸ್ಫೋಟಕ ಆಟಗಾರರು ಎರಡು ತಂಡಗಳಲ್ಲೂ ಇದ್ದು ಇಂದು ರನ್‍ಗಳ ಸುನಾಮಿ ಆಗುವ ಲಕ್ಷಣಗಳು ಇವೆ. ಆರ್‍ಸಿಬಿ ತಂಡದ ಮೊತ್ತವನ್ನು ಹಿಗ್ಗಿಸಲು ನಾಯಕ ವಿರಾಟ್‍ಕೊಹ್ಲಿ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್, ಆಸ್ಟ್ರೇಲಿಯಾ ನಾಯಕ ಆರೋನ್ ಪಿಂಚ್ ಇದ್ದರೆ, ಇವರಿಗೆ ನೆರವು ನೀಡಲು ದೇವದತ್ ಪಡಿಕ್ಕಲ್, ಶಿವಂದುಬೆರಂತಹ ಯುವ ಆಟಗಾರರಿದ್ದಾರೆ.

ಹೈದ್ರಾಬಾದ್ ತಂಡದಲ್ಲೂ ರನ್ ಮಿಷಿನ್‍ಗಳೆಂದೇ ಬಿಂಬಿಸಿಕೊಂಡಿರುವ ಐಪಿಎಲ್ ಇತಿಹಾಸದಲ್ಲಿ 3 ಬಾರಿ ಆರೇಂಜ್ ಕ್ಯಾಪ್ ವಿಜೇತ ಡೇವಿಡ್ ವಾರ್ನರ್, ಜಾನಿ ಬ್ಯಾರಿಸ್ಟೋವ್, ಕೇನ್ ವಿಲಿಯಮ್ಸ್, ಕನ್ನಡಿಗ ಮನೀಷ್‍ಪಾಂಡೆ ರಂತಹ ದೈತ್ಯರ ಪಡೆಯೇ ಇದೆ. 2019ರ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ (100*ರನ್, 55 ಎಸೆತ)ಹಾಗೂ ಬ್ಯಾರಿಸ್ಟೋವ್ (114 ರನ್, 56 ಎಸೆತ)ಆರಂಭಿಕ ವಿಕೆಟ್‍ಗೆ ದ್ವಿಶತಕ ಜೊತೆಯಾಟ ನೀಡಿದ್ದು ಈ ಬಾರಿಯೂ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದಾರೆ.

ಡೆತ್ ಓವರ್ ಸಮಸ್ಯೆದೂರ: ಆರ್‍ಸಿಬಿ ತಂಡವು ಕಳೆದ ಹಲವು ಋತುಗಳಿಂದಲೂ ಡೆತ್ ಓವರ್ ಸಮಸ್ಯೆ ಎದುರಿಸುತ್ತಾ ಬಂದಿದ್ದು ಈ ಬಾರಿ ಆ ಕೊರತೆಯನ್ನು ನೀಗಿಸುವಂತಹ ಬೌಲರ್‍ಗಳು ತಂಡದಲ್ಲಿ ಗುರುತಿಸಿಕೊಂಡಿರುವುದರಿಂದ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕುವ ಲಕ್ಷಣಗಳಿವೆ. ಆರ್‍ಸಿಬಿ ತಂಡದಲ್ಲಿ ಈ ಬಾರಿ ಡೆತ್ ಓವರ್ ಬೌಲರ್‍ಗಳಾಗಿ ಕ್ರಿಸ್ ಮೋರಿಸ್, ಉಮೇಶ್‍ಯಾದವ್, ಡೇಲ್‍ಸ್ಟೇನ್, ನವದೀಪ್‍ಸೈನಿ ಗುರುತಿಸಿಕೊಂಡಿದ್ದು ಅವರಿಗೆ ಯಜುವೇಂದ್ರ ಚಹಾಲ್ ಹಾಗೂ ಆ್ಯಡಂ ಜಂಪಾ ಉತ್ತಮ ಸಾಥ್ ನೀಡಲಿದ್ದಾರೆ. ಡೇವಿಡ್ ವಾರ್ನರ್À ನಾಯಕತ್ವದ ಎಸ್‍ಆರ್‍ಎಚ್ ತಂಡ ಕೂಡ ಬ್ಯಾಟಿಂಗ್‍ನಷ್ಟೇ ಬೌಲಿಂಗ್‍ನಲ್ಲೂ ಸಮರ್ಥವಾಗಿದ್ದು ವಿಶ್ವದ ಶ್ರೇಷ್ಠ ಬೌಲರ್‍ಗಳ ಸಾಲಿನಲ್ಲಿ ನಿಲ್ಲುವಂತಹ ಭುವನೇಶ್ವರ್‍ಕುಮಾರ್, ರಶೀದ್‍ಖಾನ್, ಮೊಹಮದ್ ನಬಿ ಇದ್ದರೆ ಸಿದ್ಧಾರ್ಥ ಕೌಲ್, ಸಂದೀಪ್‍ಶರ್ಮಾ ಕೂಡ ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ.

ದೇವದತ್ ಪಾದಾರ್ಪಣೆ: ಆರ್‍ಸಿಬಿ ತಂಡವು ಕನ್ನಡಿಗರ ತಂಡವಾಗಿದ್ದರೂ ಕೂಡ ಸ್ಥಳೀಯ ಆಟಗಾರರಿಗೆ ಮಣೆ ಹಾಕುವುದಿಲ್ಲ ಎಂಬ ಕಳಂಕವನ್ನು ಈ ಬಾರಿ ತೊಡೆದು ಹಾಕಲು ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್‍ರನ್ನು ಕಣಕ್ಕಿಳಿಸಲು ಚಿಂತಿಸಿದ್ದಾರೆ. ಪಡಿಕ್ಕಲ್ ಕಳೆದ ರಣಜಿ, ಸಕ್ಲೇನ್ ಮುಷ್ತಾಕ್ , ವಿಜಯ್ ಹಜಾರೆ ಸರಣಿಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆರೋನ್‍ಪಿಂಚ್‍ನೊಂದಿಗೆ ಇನ್ನಿಂಗ್ಸ್ ಕಟ್ಟಲು ಸಜ್ಜಾಗಿದ್ದಾರೆ.

ಸಂಭಾವ್ಯ ತಂಡ:
ಆರ್‌ಸಿಬಿ :ಆರೋನ್ ಪಿಂಚ್, ದೇವದತ್ ಪಡಿಕ್ಕಲ್, ವಿರಾಟ್‍ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಹಲ್, ಮೋಯಿನ್ ಅಲಿ, ಶಿವಂ ದುಬೆ.
ಎಸ್‍ಆರ್‍ಎಚ್: ದೇವಿಡ್ ವಾರ್ನರ್, ಜಾನಿ ಬ್ಯಾರಿಸ್ಟೋವ್, ಮನೀಶ್ ಪಾಂಡೆ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ,ವಿಜಯ್ ಶಂಕರ್, ವಿರಾಟ್ ಸಿಂಗ್, ಮೊಹಮ್ಮದ್ ನಬಿ, ಅಬ್ದುಲ್ ಸಮದ್.

Facebook Comments