ಯಶವಂತಪುರದಲ್ಲಿರುವ ಹೈಟೆಕ್ ಕೋವಿಡ್‌ ಆಸ್ಪತ್ರೆಗೆ ಕಲಡ್ಕ ಪ್ರಭಾಕರ್ ಭಟ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 22- ಯಶವಂತಪುರದಲ್ಲಿ ಕೋವಿಡ್‌ಗೆ ಮೀಸಲಾದ ಹೈಟೆಕ್ ಆಸ್ಪತ್ರೆ ಮತ್ತು ಆಸ್ಪತ್ರೆಗೆ ರೋಗಿಗಳನ್ನು ತ್ವರಿತವಾಗಿ ಕರೆ ತರಲು ಅನುವಾಗುವಂತೆ ವೇಗದ ಮಾರ್ಗ ನಿರ್ಮಿಸುತ್ತಿರುವುದು ಸಕಾಲಿಕ ಕ್ರಮ ಎಂದು ಸಂಘ ಪರಿವಾರದ ಹಿರಿಯ ಮುಖಂಡ ಡಾ. ಕಲಡ್ಕ ಪ್ರಭಾಕರ್ ಭಟ್ ತಿಳಿಸಿದರು‌

ಯಶವಂತಪುರದಲ್ಲಿ ನಿರ್ಮಿಸುತ್ತಿರುವ 400 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಾಣದ ಬಗ್ಗೆ ಮೆಚ್ಚುಗೆ ಅವರು ವ್ಯಕ್ತಪಡಿಸಿದರು.ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಮೆ ಪೀಠ ಸ್ಥಾಪನೆ ಕಾರ‍್ಯಾರಂಭಿಸಿದ ಅವರು, ಆಸ್ಪತ್ರೆಯ ಖುದ್ದು ಪರಿಶೀಲನೆ ನಡೆಸಿದರು.

ಶಾಸಕ ಮುನಿರತ್ನ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರಭಾಕರ್ ಭಟ್ ಅವರು, ಮುನಿ ಎಂದರೆ ಋಷಿ, ರತ್ನ ಎಂದರೆ ಋಷಿಗಳಲ್ಲಿ ಶ್ರೇಷ್ಠರು, ತಮ್ಮ ಸುಖವನ್ನು ತ್ಯಜಿಸಿ ಲೋಕ ಕಲ್ಯಾಣಕ್ಕೆ ಶ್ರಮಿಸುವವರೇ ಋಷಿ ಮುನಿಗಳು, ಹೆಸರಿಗೆ ತಕ್ಕಂತೆ ಮುನಿರತ್ನ ಸಹ ತಮ್ಮ ಕ್ಷೇತ್ರದ ಜನತೆ ಒಳಿತಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೊರೋನಾ- ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವ ತಮ್ಮ ಕ್ಷೇತ್ರದ ಜನತೆಗೆ ಆಹಾರ ಮತ್ತು ತರಕಾರಿ ಕಿಟ್ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಆರ್.ಆರ್.ನಗರದಲ್ಲಿ ಆಹಾರ ಕಿಟ್ ವಿತರಣೆ ನಡೆಯುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿದರು.

ಅಕ್ಕಿ, ಬೇಳೆ, ಎಣ್ಣೆ, ಗೋಧಿಹಿಟ್ಟು, ರವೆ, ಟೂತ್ ಪೇಸ್ಟ್, ಸೋಪುಗಳು ಸೇರಿದಂತೆ ತಾಜಾ ತರಕಾರಿಗಳನ್ನು ವಿತರಿಸುತ್ತಿರುವುದು ಮತ್ತು ಈ ಸಂದರ್ಭದಲ್ಲಿ ನೂಕು ನುಗ್ಗಲು ಆಗದಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮೊಬೈಲ್- ಓಟಿಪಿ ತಂತ್ರಜ್ಞಾನದ ಮೂಲಕ ಶಿಸ್ತುಬದ್ಧವಾಗಿ ದಿನಸಿ ಕಿಟ್‌ಗಳನ್ನು ನೀಡುತ್ತಿರುವುದನ್ನು ಪರಿಶೀಲಿಸಿದರು.

ಇತರೆ ಜನಪ್ರತಿನಿಧಿಗಳಿಗೆ ಮುನಿರತ್ನ ಮಾದರಿಯಾಗಿದ್ದಾರೆ. ಎಲ್ಲ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಯನ್ನು ಇದೇ ರೀತಿ ಪ್ರೀತಿ ಅಭಿಮಾನಗಳಿಂದ ಕಂಡರೆ ದೇಶಕ್ಕೆ ಒಳಿತಾಗಲಿದೆ ಎಂದು ನುಡಿದರು.ಈ ಸಂದರ್ಭದಲ್ಲಿ ಶಾಸಕ ಮುನಿರತ್ನ, ಪ್ರಭಾಕರ್ ಭಟ್ ಅವರಿಗೆ ಆಹಾರ ಪದಾರ್ಥಗಳ ವಿತರಣೆ ಮತ್ತು ಆಸ್ಪತ್ರೆ ಕಾಮಗಾರಿ ಬಗ್ಗೆ ಖುದ್ದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಜಿ.ಕೆ ವೆಂಕಟೇಶ್. ರಾಮಚಂದ್ರ. ಮುಖಂಡರಾದ ವಿ.ಸಿ.ಚಂದ್ರು. ಕಾಳೆಗೌಡ. ಯುವ ಬ್ರಿಗೇಡ್‌ನ ಜಗದೀಶ್ ಚಂದ್ರ. ನಾಗರಾಜ್. ಗೌಡರಸೇನೆಯ ರಾಜೂಗೌಡ. ಶಂಕರ್ ಸೇರಿದಂತೆ ಮತ್ತಿತರರು ಇದ್ದರು.

Facebook Comments

Sri Raghav

Admin