ಲಿಂಗರಾಜು ಕೊಲೆ ಪ್ರಕರಣ : ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಗೋವಿಂದರಾಜ್ ಸೇರಿ 12 ಮಂದಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.29- ಕಳೆದ ಎಂಟು ವರ್ಷಗಳ ಹಿಂದೆ ನಗರದಲ್ಲಿ ನಡೆದಿದ್ದ ಆರ್‍ಟಿಇ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಜಾದ್‍ನಗರ ವಾರ್ಡ್‍ನ ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಗೋವಿಂದರಾಜು ಸೇರಿದಂತೆ ಎಲ್ಲಾ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಸಿಸಿಎಚ್ ನ್ಯಾಯಾಲಯ ಆದೇಶ ನೀಡಿದೆ.

ಆರೋಪಿಗಳಾದ ರಂಗಸ್ವಾಮಿ, ಶಂಕರ್, ರಾಘವೇಂದ್ರ, ಚಂದ್ರ, ಉಮಾಶಂಕರ್ ಅಲಿಯಾಸ್ ಭವಾನಿ, ವೇಲು, ಗೋವಿಂದರಾಜ್, ಲೋಗನಾಥ್, ಜಾಹೀರ್, ಸುರೇಶ್ ಮತ್ತು ಗೌರಮ್ಮ ಅವರಿಗೆ ಸಿಸಿಎಚ್ 59ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಿ ನಾರಾಯಣ ಅವರು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.

ಕಾರ್ಪೊರೇಟರ್ ಗೌರಮ್ಮ ಅವರ ಅಕ್ರಮ ಯೋಜನೆಗಳನ್ನು ಆರ್‍ಟಿಐ ಕಾರ್ಯಕರ್ತರಾದ ಲಿಂಗರಾಜು ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರನ್ನು ಸುಫಾರಿ ಕೊಟ್ಟು ಕೊಲೆ ಮಾಡಲಾಗಿತ್ತು.

ಎಂಟು ವರ್ಷಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿತ್ತು. ನಿನ್ನೆ ಸೆಷನ್ ನ್ಯಾಯಾಲಯ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ತಿಳಿಸಿತ್ತು. ಇಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರಾದ ಲಕ್ಷ್ಮಿ ನಾರಾಯಣ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ 4500 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 134 ಸಾಕ್ಷಿಗಳ ವಿಚಾರಣೆ ನಡೆಸಿ ಎಲ್ಲ 12 ಆರೋಪಿಗಳಿಗೆ ಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದ್ದಾರೆ.

Facebook Comments