ರಸ್ತೆಗಿಳಿದ ಖಾಸಗಿ ವಾಹನಗಳು, RTO ಅಧಿಕಾರಿಗಳಿಂದ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7-ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಪರಿಸ್ಥಿತಿಯ ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಇಂದು ಆರ್‍ಟಿಒ ಅಧಿಕಾರಿಗಳು ಎಲ್ಲೆಡೆ ಬಿಸಿ ಮುಟ್ಟಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ ಸೇರಿದಂತೆ ಮತ್ತಿತರ ಕಡೆ ಆರ್‍ಟಿಒ ಅಧಿಕಾರಿಗಳು ತಪಾಸಣೆ ನಡೆಸಿ ಖಾಸಗಿಯವರಿಗೆ ಶಾಕ್ ಕೊಟ್ಟರು.

ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಒಂದಕ್ಕಿಂತಲೂ ಐದು ಪಟ್ಟು ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣ, ಯಲಹಂಕ, ವಿಜಯನಗರ, ಜಯನಗರ ಸೇರಿದಂತೆ ಮತ್ತಿತರ ಕಡೆ ಏಕಾಏಕಿ ಆರ್‍ಟಿಒ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಖಾಸಗಿ ವಾಹನಗಳು ಪ್ರಯಾಣಿಕರಿಂದ ಸರ್ಕಾರ ನಿಗದಿಪಡಿಸಿದ ದರದಲ್ಲೇ ಹಣವನ್ನು ಪಡೆಯುತ್ತಿದ್ದಾರೆಯೇ ಇಲ್ಲವೇ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಖುದ್ದು ಪ್ರಯಾಣಿಕರಿಂದಲೇ ಮಾಹಿತಿ ಪಡೆದರು. ಸರ್ಕಾರ ನಿಗದಪಡಿಸಿರುವ ದರದಂತೆಯೇ ಪ್ರಯಾಣಿಕರಿಂದ ಹಣ ಪಡೆಯಬೇಕು. ಯಾರಾದರೂ ಅಪ್ಪಿತಪ್ಪಿಯೂ ಹೆಚ್ಚು ಹಣ ಪಡೆದಿರುವುದು ಕಂಡುಬಂದರೆ ಅಂತಹ ವಾಹನಗಳ ಪರವಾನಗಿ(ಲೈಸೆನ್ಸ್) ರದ್ದುಪಡಿಸುವುದಾಗಿಯೂ ಎಚ್ಚರಿಕೆ ಕೊಟ್ಟರು.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಾನಾ ಕಡೆ ಆರ್‍ಟಿಒ ಅಧಿಕಾರಿಗಳು ಖಾಸಗಿಯವರ ಧನದಾಹಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಆಟೋದವರ ವಸೂಲಿ ಮಾತ್ರ ತಪ್ಪಿರಲಿಲ್ಲ. ಕೆಲವು ಕಡೆ 1ಕ್ಕಿಂತ 5 ಪಟ್ಟು , 6 ಪಟ್ಟು ದರವನ್ನು ವಸೂಲಿ ಮಾಡಲಾಗಿದೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿಬಂದಿದೆ.

ಕೋಲಾರದಿಂದ ವೇಮಗಲ್‍ಗೆ ಹೊರಟ್ಟಿದ್ದ ಪ್ರಯಾಣಿಕರೊಬ್ಬರಿಗೆ ಆಟೋ ಚಾಲಕ 100 ರೂ. ಬದಲಿಗೆ 600 ರೂ. ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಇನ್ನೊಂದೆಡೆ ಸರ್ಕಾರ ಖಾಸಗಿಯವರು ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಪಡೆಯಬಾರದು ಎಂದು ಮನವಿ ಮಾಡಿದೆ.

Facebook Comments