ವಾಹನಗಳ ನೋಂದಣಿಯಲ್ಲಿ ಅಕ್ರಮ : ನಾಲ್ವರು ಆರ್‌ಟಿಒ ಅಧಿಕಾರಿಗಳ ವಿರುದ್ಧ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ವಾಹನಗಳ ನೋಂದಣಿಯಲ್ಲಿ ಅಕ್ರಮವೆಸಗಿದ ನಿವೃತ್ತ ಆರ್‌ಟಿಒ ಸೇರಿದಂತೆ ಮೂರು ಮಂದಿ ಸಾರಿಗೆ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಬೀದರ್‍ನ ಮಾಣಿಕೇಶ ಅವರು ಲೋಕಾಯುಕ್ತಕ್ಕೆ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದಾಗ ಕಲಬುರ್ಗಿ ಮತ್ತು ಬೀದರ್ ಸಾರಿಗೆ ಕಚೇರಿಗಳಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಾಹನಗಳ ತಾತ್ಕಾಲಿಕ ಮತ್ತು ಖಾಯಂ ನೋಂದಣಿ ಮಾಡಿಕೊಟ್ಟಿರುವುದು ದೃಢಪಟ್ಟಿದೆ.

ಸದರಿ ಅಧಿಕಾರಿಗಳು ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ಕರ್ತವ್ಯ ನಿರ್ಲಕ್ಷಿಸಿದ್ದಾರೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ. ದುರಸ್ತಿಗೆ ಬಂದು ರಿಪೇರಿ ಮಾಡಲು ಸಾಧ್ಯವಾಗದಷ್ಟು ಹದಗೆಟ್ಟು ಗುಜರಿ ಸೇರಿದ ವಾಹನಗಳ ಸಂಖ್ಯೆಗಳನ್ನು ಹೊಸ ವಾಹನಗಳಿಗೆ ಜೋಡಣೆ ಮಾಡಿ ನೋಂದಣಿ ಮಾಡಿರುವುದು ಉಪಲೋಕಾಯುಕ್ತರ ತನಿಖೆಯ ವೇಳೆ ಸಾಬೀತಾಗಿದೆ.

ಹೀಗಾಗಿ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭಾಕರ್, ಕಲಬುರ್ಗಿಯ ಜಂಟಿ ಸಾರಿಗೆ ಆಯುಕ್ತರ ಕಚೇರಿಯ ಅಧೀಕ್ಷಕ ಬೋಡೆ ರಿಯಾಜ್ ಅಹಮ್ಮದ್, ಬೀದರ್ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಈಗಿನ ಅಧೀಕ್ಷಕಿ ವಿಜಯಲಕ್ಷ್ಮಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಟಾಟಾ ಆಪರೇಟರ್ ದಿನೇಶ್‍ಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ ಪ್ರಭಾಕರ್ ಅವರು ನಿವೃತ್ತರಾಗಿದ್ದು, ನಿಯಮಾವಳಿ ಪ್ರಕಾರ ನಿವೃತ್ತಿಯ ಅವಧಿ ನಾಲ್ಕು ವರ್ಷ ಒಳಗಿರುವುದಾಗಿ ಅವರನ್ನೂ ಕೂಡ ಇಲಾಖಾ ವಿಚಾರಣೆ ಒಳಪಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments