ಹೊರರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗೆ RT-PCR ಟೆಸ್ಟ್ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.3- ಹೊರರಾಜ್ಯಗಳಿಂದ ಬರುವವರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದ್ದು, ವರದಿ ಬರುವವರೆಗೆ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.  ಟೆಸ್ಟ್ ವರದಿ ಬರುವವರಿಗೆ ಪಾಲಿಕೆ ಹೊಟೇಲ್‍ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತದೆ. ನಾವು ಮಾಡುವ ಮೂಲಭೂತ ವ್ಯವಸ್ಥೆ ಅವರಿಗೆ ಬೇಡವೆಂದರೆ ಅವರ ಅನುಕೂಲಕ್ಕೆ ತಕ್ಕಹಾಗೆ ಹೊಟೇಲ್ ವ್ಯವಸ್ಥೆ ಮಾಡಿಕೊಳ್ಳಬಹುದು. ಕೆಲವು ಹೊಟೇಲ್‍ಗಳನ್ನು ನಾವೇ ನಿಗದಿ ಮಾಡಿದ್ದೇವೆ. ಅದರ ಖರ್ಚು-ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕೋವಿಡ್ ಎರಡನೆ ಅಲೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅವೆಲ್ಲವುಗಳನ್ನೂ ಮುಂದುವರಿಸಲಾಗುವುದು. ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಹೊರಗಿನಿಂದ ಬರುವವರ ಮೂಲಕ ಸೋಂಕು ಹರಡುವಿಕೆ ತಡೆಯಲು ಸಾಕಷ್ಟು ಕ್ರಮ ವಹಿಸಲಾಗಿದೆ. ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುವಂತಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಸೋಂಕು ಕಡಿಮೆ ಇದ್ದು, ಈಗ ವಿಧಿಸಿರುವ ನಿರ್ಬಂಧಗಳು ಸಾಕಾಗುತ್ತದೆ. ಹೆಚ್ಚು ಸೋಂಕು ಬಂದರೆ ವೀಕೆಂಡ್ ಕಫ್ರ್ಯೂ ಮತ್ತು ಇತರೆ ಕ್ರಮಗಳನ್ನು ವಹಿಸಲಾಗುವುದು ಎಂದು ಹೇಳಿದರು. ಕೊರೊನಾ ಸೋಂಕು ಡೆಲ್ಟಾ ಸೋಂಕಾಗಿ ಪರಿವರ್ತನೆಯಾಗಿದ್ದು, ಅಪಾರ್ಟ್‍ಮೆಂಟ್‍ಗಳಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಸೋಂಕು ನಿಯಂತ್ರಣದ ಬಗ್ಗೆ ಸಭೆ ನಡೆಸಲಾಗುವುದು.

ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಯಾವುದೇ ಸಂದರ್ಭದಲ್ಲಿ ಹಾಸಿಗೆ ದೊರೆಯುವಂತೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.ಸ್ಮಾರ್ಟ್ ಪಾರ್ಕಿಂಗ್ ಪರಿಶೀಲನೆ: ಸ್ಮಾರ್ಟ್ ಪಾರ್ಕಿಂಗ್ ಕೆಲವು ಕಡೆ ನಿರ್ಮಿಸಿದ್ದ ಕೇಂದ್ರಗಳನ್ನು ಕಿಡಿಗೇಡಿಗಳು ಹಾಳು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅದರ ಬಗ್ಗೆ ವರದಿ ತರಿಸಿಕೊಂಡು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ವೈಟ್ ಟಾಪಿಂಗ್ ಸೂಚನೆ ಬಂದಿಲ್ಲ: ಮೂರನೆ ಹಂತದ ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಿಲ್ಲ. ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments