ಬಗೆದಷ್ಟು ಬಯಲಾಗುತ್ತಿದೆ ರುದ್ರೇಶಪ್ಪನ ‘ಬಂಡವಾಳ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಗದಗ ಕೃಷಿ ಇಲಾಖೆ ನಿರ್ದೇಶಕ ರುದ್ರೇಶಪ್ಪ ಅವರನ್ನು ವಶಕ್ಕೆ ಪಡೆದಿರುವ ಎಸಿಬಿ ಇಂದು ಅವರ ಎಸ್‍ಬಿಎಂ ಬ್ಯಾಂಕ್ ಖಾತೆ ಮತ್ತು ಲಾಕರ್‍ಗಳ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ರುದ್ರೇಶಪ್ಪ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ವೇಳೆ ಅಕ್ಷಯ ಪಾತ್ರೆಯೇ ಪತ್ತೆಯಾಗಿತ್ತು. ಇಂದು ಮತ್ತೆ ಶಿವಮೊಗ್ಗದ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ.

ರುದ್ರೇಶಪ್ಪ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ, ಬೆಳ್ಳಿ ಸಾಮಾನುಗಳು ಹಾಗೂ ಲಕ್ಷಾಂತರ ಹಣ ಪತ್ತೆಯಾಗಿತ್ತು. ಇಂದು ಮತ್ತೆ ಎಸಿಬಿ ಅಧಿಕಾರಿಗಳು ರುದ್ರೇಶಪ್ಪ ಅವರ ಬ್ಯಾಂಕ್ ಖಾತೆಗಳು ಹಾಗೂ ಮೂರು ಲಾಕರ್‍ಗಳನ್ನು ಪರಿಶೀಲನೆ ನಡೆಸಿದರು.

ರುದ್ರೇಶಪ್ಪ ಅವರಿಗೆ ಸೇರಿದ ಶಾಲಾ ವಾಹನ, ಎರಡು ಟ್ರ್ಯಾಕ್ಟರ್ ಹಾಗೂ ಶಿವಮೊಗ್ಗದಲ್ಲಿ ನಾಲ್ಕು ಸೈಟುಗಳು ಇರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದುವರೆಗೂ ರುದ್ರೇಶಪ್ಪ ಅವರ ಮನೆಯಲ್ಲಿ ಪತ್ತೆಯಾದ ದಾಖಲೆಗಳ ಅನುಸಾರ ಒಂದು ಕಾರು ಅತ್ತೆ ಹೆಸರಿನಲ್ಲಿ ಹಾಗೂ ಮತ್ತೊಂದು ಕಾರು ಪತ್ನಿ ಹೆಸರಿನಲ್ಲಿರುವುದು ಪತ್ತೆಯಾಗಿದೆ.

ಶಿವಮೊಗ್ಗದ ಚಾಲುಕ್ಯನಗರ ನಿವಾಸದಲ್ಲೂ ನಿನ್ನೆ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದಾಗ 8 ಕೆಜಿ ಬಂಗಾರದ ಬಿಸ್ಕೆಟ್ ಪತ್ತೆಯಾಗಿತ್ತಲ್ಲದೆ ಒಂದೂವರೆ ಕೆಜಿ ಬಂಗಾರದ ಆಭರಣಗಳು, 3 ಕೆಜಿಗೂ ಹೆಚ್ಚು ಬೆಳ್ಳಿ ವಸ್ತುಗಳು ಹಾಗೂ 15 ಲಕ್ಷ ಹಣ ಪತ್ತೆಯಾಗಿತ್ತು.

ಅಲ್ಲದೆ, ಮನೆಯಲ್ಲಿ ನಾಟಾ ಕೂಡ ಸಿಕ್ಕಿದ್ದು, ಮನೆಯಲ್ಲೇ ಸಂಗ್ರಹ ಮಾಡಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ತಪಾಸಣೆ ನಡೆಸಿದ್ದು, ಇದು ಅಕ್ರಮ ನಾಟಾವೋ ಇಲ್ಲವೆ ಪರವಾನಗಿ ಪಡೆದು ಖರೀದಿ ಮಾಡಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ ವಿವಿಧ ಆಸ್ತಿಗಳ ದಾಖಲೆಯೂ ಪತ್ತೆಯಾಗಿದ್ದು, ಚನ್ನಗಿರಿಯಲ್ಲಿ ಭೂಮಿ ಹೊಂದಿರುವ ಮಾಹಿತಿ ಲಭ್ಯವಾಗಿದ್ದು, ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ರುದ್ರೇಶಪ್ಪ ಕೆಲಸದ ನಿಮಿತ್ತ ಗದಗ ನಗರದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇವರ ಕುಟುಂಬ ಶಿವಮೊಗ್ಗದಲ್ಲಿ ನೆಲೆಸಿದೆ.

ಎಸಿಬಿ ಎಸ್‍ಪಿ ಸೂಚನೆ ಮೇರೆಗೆ ರುದ್ರೇಶಪ್ಪ ಅವರು ಹೆಚ್ಚಿನ ವಿಚಾರಣೆಗಾಗಿ ಶಿವಮೊಗ್ಗದಲ್ಲಿ ಎಸಿಬಿ ವಶದಲ್ಲಿದ್ದಾರೆ. ರುದ್ರೇಶಪ್ಪ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಸಾಬೀತಾದರೆ ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಂಡು ಕೋರ್ಟ್‍ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಪ್ರಕರಣ ಫಿಕ್ಸ್: ಎಸಿಬಿ ದಾಳಿಗೊಳಗಾದವರ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ದಾಳಿಗೊಳಗಾದ 15 ಅಧಿಕಾರಿಗಳ ಒಟ್ಟು ಚಿರಾಸ್ತಿ, ಚರಾಸ್ತಿಗಳನ್ನು ಲೆಕ್ಕ ಹಾಕಲಿರುವ ಎಸಿಬಿ, ಉಳಿದ ಆಸ್ತಿಗಳಿಗೆ ಲೆಕ್ಕ ಕೇಳಲಿದ್ದಾರೆ. ಒಂದು ವೇಳೆ ಇವುಗಳಿಗೆ ಸೂಕ್ತ ದಾಖಲೆ ಒದಗಿಸದಿದ್ದರೆ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.

ಈ ಅಧಿಕಾರಿಗಳ ಮೇಲೆ ಬಂದಿರುವ ಅಕ್ರಮ ಆಸ್ತಿ ಸಂಪಾದನೆ ಆರೋಪ ಸಾಬೀತಾದರೆ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ಈ ಅಧಿಕಾರಿಗಳ ಹೆಸರಿನಲ್ಲಿ ಬ್ಯಾಂಕ್ ಲಾಕರ್‍ಗಳು ಇವೆಯೇ ಎಂಬುದನ್ನು ದಾಳಿ ವೇಳೆ ಪತ್ತೆಯಾದ ದಾಖಲೆಗಳನ್ನು ಮುಂದಿಟ್ಟುಕೊಂಡು ತಲಾಶ್ ಮಾಡುತ್ತಿದ್ದಾರೆ.

ಒಂದು ವೇಳೆ ಲಾಕರ್‍ಗಳಲ್ಲಿ ಚಿನ್ನಾಭರಣಗಳಿದ್ದರೆ ಲೆಕ್ಕಕ್ಕೆ ಪಡೆದುಕೊಂಡು ಎಸಿಬಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Facebook Comments