ಪಾದರಾಯನಪುರ ಪುಂಡರ ವಿರುದ್ಧ ಮುಲಾಜಿಲ್ಲದೆ ಕಾನೂನು ಅಸ್ತ್ರ ಪ್ರಯೋಗಿಸಿ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20-ನಗರದ ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಡಳಿತ ವ್ಯವಸ್ಥೆಯ ನೈತಿಕ ಬಲ ಕುಗ್ಗಿಸುವ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ ದಂಗೆ ಏಳುವವರರ ಹೆಡೆಮುರಿ ಕಟ್ಟಬೇಕು ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ‌.

ದೇಶದ ಸ್ವಾಸ್ಥ್ಯಕ್ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ, ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು ಯಾರೂ ಪ್ರದರ್ಶಿಸಕೂಡದು ಎಂದಿದ್ದಾರೆ.

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ ಬಲಿ ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.

Facebook Comments

Sri Raghav

Admin